ಬಂಟ್ವಾಳ: ಮೈಸೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮುಹಮ್ಮದ್ ಮುಸ್ತಫಾ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಘಟಕದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಅವರಿಗೆ ಶುಕ್ರವಾರ ಸಂಜೆ ಮನವಿ ಸಲ್ಲಿಸಲಾಯಿತು.
ಮುಸ್ತಫಾ ಕೊಲೆ ಪ್ರಕರಣ ಖಂಡಿಸಿ ಪಿಎಫ್‌ಐ ಬಂಟ್ವಾಳ ತಾಲೂಕು ಘಟಕ ಬಿ.ಸಿ.ರೋಡಿನಲ್ಲಿರುವ ತಾಲೂಕು ಕಚೇರಿ ಎದುರು ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ 144 ಸೆಕ್ಷನ್ ಹಾಗೂ ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿಗೆ ಆಗಮಿಸಿದ್ದ ಜಿಲ್ಲಾ ಎಸ್ಪಿ, ಪಿಎಫ್‌ಐ ಮುಖಂಡರನ್ನು ಬಂಟ್ವಾಳ ನಗರ ಠಾಣೆಗೆ ಕರೆದು ಪ್ರತಿಭಟನೆ ಕೈಬಿಡುವಂತೆ ಹೇಳಿದ ಬಳಿಕ, ಪಿಎಫ್‌ಐ ಮುಖಂಡರು ಮುಸ್ತಫಾ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಸ್ಪಿ ಮೂಲಕ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ರಾಜ್ಯ ಬಂಧೀಖಾನೆ ಮುಖ್ಯ ಅಧೀಕ್ಷಕ, ರಾಜ್ಯ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಜಿಲ್ಲಾಧಿಕಾರಿಗೆ ಮನವಿಯನ್ನು ಅರ್ಪಿಸಿದರು.
ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕೊಲೆಯ ಹಿಂದಿರುವ ಅಪರಾಧಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸಲು ವಿಫಲವಾದರೆ ತಾಲೂಕಿನಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಝಕರಿಯಾ ಗೋಳ್ತಮಜಲು, ಕಾರ್ಯದರ್ಶಿ ಸಲೀಮ್ ಕುಂಪಣಮಜಲು, ಮುಖಂಡರಾದ ಇಸಾಕ್ ಶಾಂತಿಯಂಗಡಿ, ಶಬೀರ್ ಶಾಂತಿಯಂಗಡಿ, ಖಲೀಲ್ ಕಲ್ಲಡ್ಕ ಉಪಸ್ಥಿತರಿದ್ದರು.
Be the first to comment on "ಮುಸ್ತಫಾ ಕೊಲೆ ಪ್ರಕರಣ:ನ್ಯಾಯಾಂಗ ತನಿಖೆಗೆ ಆಗ್ರಹ"