ವಿಟ್ಲ: ಯಾರಿಗೂ ತಿಳಿಯದೆ ಮುಚ್ಚಿಟ್ಟ ಕೃತಿಗಳನ್ನು ಹೊರ ತರುವುದು ಭೂಮಿಯಲ್ಲಿನ ರತ್ನವನ್ನು ಹೊರತೆಗೆದಂತೆ ಎಂದು ಸಂಗೀತ ನಿರ್ದೇಶಕ ವಿ ಮನೋಹರ್ ಹೇಳಿದರು.
ಶುಕ್ರವಾರ ವಿಟ್ಲ ಜಯದುರ್ಗಾ ನಿವಾಸದಲ್ಲಿ ಮಹಾನ್ ವ್ಯಾಕರಣ ಪಂಡಿತ ವಿದ್ವಾನ್ ಡಿ.ವಿ.ಹೊಳ್ಳ ಅವರ ಸಂಜ್ಞಾರ್ಥ ತತ್ವಕೋಶ (ಕನ್ನಡಿಗರಿಗೊಂದು ಅಮೂಲ್ಯ ನಿಧಿ) ಎಂಬ ಗ್ರಂಥ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ವಾನ್ ಡಿ.ವಿ.ಹೊಳ್ಳ ಅವರ ಸಂಜ್ಞಾರ್ಥ ತತ್ವಕೋಶ (ಕನ್ನಡಿಗರಿಗೊಂದು ಅಮೂಲ್ಯ ನಿಧಿ) ಎಂಬ ಗ್ರಂಥವನ್ನು ಅಂಕಣಕಾರ ಪ್ರೊ.ವಿ.ಬಿ.ಅರ್ತಿಕಜೆ ಅನಾವರಣಗೊಳಿಸಿದರು.
ಬೆಂಗಳೂರಿನಂತಹ ನಗರದಲ್ಲಿ ಕೃತಜ್ಞ ಮತ್ತು ಕೃತಘ್ನ ಪದಕ್ಕೆ ಒಂದೇ ಪದ ಕೃತಘ್ನವನ್ನು ಬಳಸುತ್ತಾರೆ. ಮೂಲ ಪದಗಳು ಕಡಿಮೆಯಾಗುತ್ತಿದ್ದಂತೆ ಬಾಷೆ ದುರ್ಬಲವಾಗುತ್ತಾ ಸಾಗುತ್ತದೆ. ಪುಸ್ತಕಗಳನ್ನು ಮನೆ ಮನಗಳಿಗೆ ಶಂಕರ ಕುಳಮರ್ವ ಅವರು ತಲುಪಿಸುವ ಮೂಲಕ ಕನ್ನಡದ ನಿಜವಾದ ಸೇವಕರಾಗಿದ್ದಾರೆ. ಆರ್ಥಿಕ ಸ್ವಾರ್ಥಿಕ ಇಲ್ಲದವರಿಂದ ಮಾತ್ರ ಸಾರ್ಥಕ ಕೆಲಸ ಸಾಧ್ಯ ಎಂದು ತಿಳಿಸಿದರು. ಸಾಹಿತ್ಯದ ಕೃತಿಚೌರ್ಯ ಮಾಡಿಕೊಂಡು ಪುಸ್ತಕ ಬಿಡುಗಡೆ ಮಾಡುವ ಶೇವಕರು ಹೆಚ್ಚುತ್ತಿದ್ದಾರೆ. ಕನ್ನಡದ ನಿಜವಾದ ಸಾಹಿತ್ಯಗಳನ್ನು ಪ್ರಕಟಿಸುವವ ನಿಜವಾದ ಕನ್ನಡದ ಸೇವಕರಾಗಿದ್ದಾರೆ ಎಂದು ವಿಶ್ಲೇಷಿಸಿದರು.
ಕತೆಗಾರ್ತಿ, ಸಾಹಿತಿ ವೈದೇಹಿ ಮಾತನಾಡಿ ಕನ್ನಡದ ಪದ ಬಳಕೆಯಲ್ಲಿ ಸಣ್ಣ ತಪ್ಪಾದರೂ ಸಹಿಸದವರು ವಿದ್ವಾನ್ ಡಿ.ವಿ.ಹೊಳ್ಳ ಅವರು ಮನೆಯೊಳಗೆಯೂ ಕನ್ನಡದ ಬಗೆಗಿನ ಚರ್ಚೆಯನ್ನು ನಡೆಸಿಕೊಂಡಿದ್ದರು. ಕನ್ನಡ ಪಂಡಿತರ ಪರಂಪರೆಗೆಳು ಕರಾವಳಿಯ ಉದ್ದಕ್ಕೂ ಬಂದು ಹೋಗಿದ್ದಾರೆ. ಕನ್ನಡವನ್ನು ಉಸಿರು ಜೀವನ ಎಂದು ಮಾಡಿಕೊಂಡು ಬದುಕಲು ಕಷ್ಟ ಎಂದು ಹೇಳಿದರು.
ವೇದಮೂರ್ತಿ ಕಲ್ಲುಕುಟ್ಟಿಮೂಲೆ ರವಿಶಂಕರ ಭಟ್ ಅವರು ದೀಪಜ್ವಲನ ನಡೆಸಿದರು. ಅಂಕಣಕಾರ ಪ್ರೊ.ವಿ.ಬಿ.ಅರ್ತಿಕಜೆ ಗ್ರಂಥವನ್ನು ಅನಾವರಣಗೊಳಿಸಿದರು. ವಿಶ್ರಾಂತ ಪ್ರಾಚಾರ್ಯ ಎಂ.ಅನಂತಕೃಷ್ಣ ಹೆಬ್ಬಾರ್ ಕೃತಿಯ ಬಗ್ಗೆ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಉಪ್ಪಂಗಳ ಶಂಕರನಾರಾಯಣ ಭಟ್ ಅವರು ಕೃತಿಕರ್ತೃ ಬಗ್ಗೆ, ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರು ಡಿ.ವಿ.ಹೊಳ್ಳ ಅವರ ಬಗ್ಗೆ ಮಾತನಾಡಿದರು.
ಸುಲೋಚನಾದೇವಿ ಹೊಸಾಳ, ಬಾರ್ಕೂರು ಅವರನ್ನು ಸನ್ಮಾನಿಸಲಾಯಿತು. ಗ್ರಂಥ ಅನಾವರಣಕ್ಕೆ ಸಹಕರಿಸಿದ ಎಂ.ಅನಂತಕೃಷ್ಣ ಹೆಬ್ಬಾರ್ ಮತ್ತು ಕೃಷ್ಣ ಕುಮಾರ್ ದಂಪತಿಯನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಪೆರಡಂಜಿ ಗೋಪಾಲಕೃಷ್ಣ ಭಟ್ ವಹಿಸಿದ್ದರು.
ಹಿರಿಯ ಜಾದೂಗಾರ ಉಡುಪಿಯ ಪ್ರೊ.ಶಂಕರ್, ಹುಬ್ಬಳ್ಳಿ ಅನನ್ಯ ಫೀಡ್ಸ್ ಮಾಲಕ ದಿವಾಣ ಗೋವಿಂದ ಭಟ್, ಕುಳಮರ್ವ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಶಂಕರ ಕುಳಮರ್ವ ಸ್ವಾಗತಿಸಿ ಪ್ರಸ್ತಾವನೆಗೈದರು. ಶಾಂತಾ ಎಸ್.ಎನ್.ಭಟ್ ವಂದಿಸಿದರು. ಅನ್ನಪೂರ್ಣ ಶರ್ಮ ಕಾರ್ಯಕ್ರಮ ನಿರೂಪಿಸಿದರು.

Be the first to comment on "ಮುಚ್ಚಿಟ್ಟ ಕೃತಿ ಹೊರತರುವುದು ಭೂಮಿಯಿಂದ ರತ್ನ ತಂದಂತೆ"