ಕಲ್ಲಡ್ಕ: ಸೋಡಾ ಬಾಟಲಿಯನ್ನು ಕುಡಿದ ಮತ್ತಿನಲ್ಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಆತಂಕದ ವಾತಾವರಣ ನಿರ್ಮಾಣವಾಯಿತು.
ಘಟನೆಯಿಂದಾಗಿ ಸ್ಥಳದಲ್ಲಿ ಜನರು ಜಮಾಯಿಸತೊಡಗುತ್ತಿದ್ದಂತೆ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ನಗರ ಠಾಣೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಹಾಗೆಯೇ ಬಾಟ್ಲಿ ಎಸೆದ ಆರೋಪದಲ್ಲಿ ಸುಂದರ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈತ ಎಸೆದ ಬಾಟ್ಲಿ ಅಂಗಡಿಯೊಂದರ ಮುಂಭಾಗ ರಸ್ತೆಯಲ್ಲಿ ಬಿದ್ದು ಪುಡಿಯಾಗಿದೆ.
ಬಿಗಿ ಭದ್ರತೆ:
ಘಟನೆಯ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಲ್ಲಡ್ಕ, ಬಂಟ್ವಾಳ, ಬಿ.ಸಿ.ರೋಡ್ ಮೊದಲಾದ ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಜಿಲ್ಲೆಯ ಉಳ್ಳಾಲ ಹಾಗೂ ಮೈಸೂರು ಜೈಲಿನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಮುಂಜಾಗರೂಕತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಹಾಗೆಯೇ ಕಲ್ಲಡ್ಕದಲ್ಲಿ ಮದ್ಯವ್ಯಸನಿಯಿಂದ ಬಾಟ್ಲಿ ಎಸತಕ್ಕೆ ಸಂಬಂಧಿಸಿಯೂ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜನರು ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡದೆ ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದರು.
ಮೈಸೂರಿನ ಜೈಲಿನಲ್ಲಿ ನಡೆದ ಮಂಗಳೂರಿನ ಕಾವೂರು ನಿವಾಸಿ ಮುಸ್ತಫಾನ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಆತನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಂಘಟನೆಯೊಂದರ ಕಾರ್ಯಕರ್ತರು ತನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ಎಸ್ಪಿ ಬೊರಸೆಯವರು ತಳಿಸಿದರು.
ಡಿಸಿ ಭೇಟಿ
ಜಿಲ್ಲಾಧಿಕಾರಿ ಡಾ. ಜಗದೀಶ್ ಕೂಡ ಬಂಟ್ವಾಳಕ್ಕೆ ಭೇಟಿ ನೀಡಿ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿರುವ ಎಸ್ಪಿ ಭೂಷಣ್ ಜಿ. ಬೊರಸೆಯವರೊಂದಿಗೆ ಘಟನೆಯ ಮಾಹಿತಿ ಪಡೆದರು. ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.
Be the first to comment on "ಬಾಟಲಿ ಎಸೆದ ಪ್ರಕರಣ: ಕಲ್ಲಡ್ಕದಲ್ಲಿ ಬಂದೋಬಸ್ತ್"