ವಿಟ್ಲ: ಮನೆಯಿಂದ ನಾಪತ್ತೆಯಾದ ಯುವತಿಯನ್ನು ಕಾಸರಗೋಡು ನಾಯಿನಾರ್ ಮೂಲೆ ಎಂಬಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ತೆರಳಿದ ಯುವತಿಯನ್ನು ದೂರು ನೀಡಿದ 48 ಗಂಟೆ ಒಳಗೆ ಪತ್ತೆ ಹಚ್ಚುವಲ್ಲಿ ವಿಟ್ಲ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ.
ಕನ್ಯಾನ ಗ್ರಾಮದ ಪಿಲಿಂಗುಳಿ ನಿವಾಸಿ ಗಣ್ಯಶ್ರೀ (21) ನ.9ರಂದು ಮಧ್ಯಾಹ್ನ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ತಾಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ತನಿಖೆ ಆರಂಭಿಸಿದ್ದರು. ಇಬ್ಬರ ಸಮಗ್ರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದರು.
ಕೇರಳದ ವಿದ್ಯಾನಗರ ಪೊಲೀಸ್ ಠಾಣಾವ್ಯಾಪ್ತಿಯ ನಾಯಿನಾರ್‌ಮೂಲೆ ಎಂಬಲ್ಲಿ ಕನ್ಯಾನ ಶಿರಂಕಲ್ಲು ನಿವಾಸಿ ಸಮೀರ್ ಜತೆಗೆ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ನಡೆಸಿ ಯುವಕನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ. ತಾಯಿ ಜತೆಗೆ ಯುವತಿ ಹೋಗುವುದಿಲ್ಲ ಎಂದ ಕಾರಣಕ್ಕೆ ಮಂಗಳೂರು ಮನಪರಿವರ್ತನಾ ಕೇಂದ್ರಕ್ಕೆ ದಾಖಲಿಸಲಾಗಿದೆ.
ದ ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ, ಹೆಚ್ಚುವರಿ ಅಧೀಕ್ಷಕ ವೇದಮೂರ್ತಿ, ಬಂಟ್ವಾಳ ಸಹಾಯಕ ಅಧೀಕ್ಷಕ ರವೀಶ್ ಸಿಆರ್ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ನೇತೃತ್ವದ ತಂಡ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಬಂಟ್ವಾಳ ಗ್ರಾಮಾಂತರ ಠಾಣೆಯ ಸಹಾಯಕ ಉಪನಿರೀಕ್ಷಕ ಭಾರತಿ, ಸಿಬ್ಬಂದಿಗಳಾದ ಪ್ರವೀಣ್ ರೈ, ರಮೇಶ್, ರಕ್ಷಿತ್ ರೈ, ಭವಿತ್ ರೈ, ಚಿತ್ರಲೇಖ, ಕೇಶವತಿ ಭಾಗವಹಿಸಿದರು.
ಮಧ್ಯಾಹ್ನ ಕನ್ಯಾನ ಮೂಲಕ ಉಪ್ಪಳಕ್ಕೆ ತೆರಳಿದ ಗಣ್ಯಶ್ರೀ ಅಲ್ಲಿಂದ ಸಮೀರ್ ಜತೆಯಾಗಿ ಕಾಸರಗೋಡಿಗೆ ತೆರಳಿದ್ದಾರೆ. ಇದು ಯುವತಿಯೇ ಹೋದ ಹಿನ್ನಲೆಯಲ್ಲಿ ಯುವಕನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ.
Be the first to comment on "ನಾಪತ್ತೆಯಾದ ಯುವತಿ ಪತ್ತೆಹಚ್ಚುವಲ್ಲಿ ಸಫಲರಾದ ಪೊಲೀಸರು"