- ಸಿದ್ದರಾಮಯ್ಯ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ಟೀಕೆ
ಬಂಟ್ವಾಳ: ಸೆಕ್ಷನ್ ಜಾರಿಗೊಳಿಸಿ, ಎಲ್ಲರನ್ನೂ ಭಯದ ವಾತಾವರಣದಲ್ಲಿಟ್ಟುಕೊಂಡು ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಅಗತ್ಯವಿದೆಯೇ ಎಂದು ಸಂಸದ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಮತಬ್ಯಾಂಕ್ ಗಾಗಿ ಮಾಡುತ್ತಿರುವ ನಾಟಕ ಇದಾಗಿದ್ದು, ಇದನ್ನು ದ.ಕ.ಜಿಲ್ಲಾ ಬಿಜೆಪಿ ಕಟುವಾಗಿ ಖಂಡಿಸುತ್ತದೆ ಎಂದರು.
ಟಿಪ್ಪುಜಯಂತಿಗೆ ರಾಜ್ಯದ ಜನತೆ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಮಾರಿ ಧೋರಣೆ, ಅಹಂಕಾರ ಹಾಗೂ ದರ್ಪಕ್ಕೆ ಉದಾಹರಣೆ ಎಂದ ಅವರು, ಈ ಸಂದರ್ಭ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ಮುಖ್ಯಮಂತ್ರಿಯವರೇ ನೇರ ಹೊಣೆ ಎಂದರು.
ಮಂಗಳೂರಿನಲ್ಲಿ ನಡೆಯಲಿರುವ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾಡಳಿತದಿಂದ ಆಮಂತ್ರಣ ಬಂದಿದೆ, ಆದರೆ ಕಾರ್ಯಕ್ರಮ ನಡೆಯುವ ಜಿಪಂ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದರು.
ಪಂಚ ತೀರ್ಥ-ಸಪ್ತಕ್ಷೇತ್ರ ಯಾತ್ರೆ ದಿನ ಮುಂದೂಡಿಕೆ
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಸುಬ್ರಹ್ಮಣ್ಯದಿಂದ ಕಟೀಲು ವರೆಗೆ ಪಂಚ ತೀರ್ಥ-ಸಪ್ತಕ್ಷೇತ್ರ ಯಾತ್ರೆಯನ್ನು ಡಿ.10 ರಿಂದ 12 ವರೆಗೆ ನಡೆಸಲಾಗುವುದು ಎಂದ ಅವರು, ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಜಿಲ್ಲೆಗೆ ಅನ್ಯಾಯವಾಗಲು ತಾನು ಬಿಡುವುದಿಲ್ಲ ಎಂದರು. ಜಿಲ್ಲೆಯ ಹೋರಾಟಗಾರರೊಂದಿಗೆ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಎಂದು ರಾಜ್ಯದ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇವೆಯಾದರೂ, ಇದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ, ದೆಹಲಿ ಹಸಿರು ಪೀಠ ನ್ಯಾಯಾಲಯವೂ ಕೂಡ ಹೋರಾಟಗಾರರ ಪರವಾಗಿ ತೀರ್ಪು ನೀಡಿದ್ದು, ಸರ್ಕಾರ ಜಿಲ್ಲೆಯ ಜನರ ಭಾವನೆಗಳನ್ನುಅ ಅರ್ಥಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಪಂಚ ತೀರ್ಥ-ಸಪ್ತಕ್ಷೇತ್ರ ಯಾತ್ರೆಯನ್ನು ಈ ಮೊದಲು ಡಿ.4ರಂದ 6 ವರೆಗೆ ನಿಗದಿಯಾಗಿತ್ತು, ಆದರೆ ಇದೀಗ ಆ ದಿನದಂದೇ ಎಪಿಎಂಸಿ ಚುನಾವಣೆ ಘೋಷಣೆಯಾಗಿರುವುದರಿಂದ ವಾರದ ಕಾಲ ಮುಂದೂಡಲಾಗಿದೆ ಎಂದರು.
ಜಿಲ್ಲೆಯ ಯಾವುದೇ ನದಿಗೂ ಕೈ ಹಾಕಿದರೆ ತೀವ್ರ ಹೋರಾಟ ನಡೆಸಲಾಗುವುದು. ಸರ್ಕಾರ ಉಡುಪಿ, ಗೋಕರ್ಣ ಕ್ಷೇತ್ರ ವಶಪಡಿಸಿಕೊಳ್ಳುವ ಯತ್ನಕ್ಕೆ ತೊಡಗಿದೆ ಎಂದು ಟೀಕಿಸಿದರು.
ಜಿಲ್ಲೆಗೆ 100 ಜನರಿಕ್ ಔಷಧಾಲಯ
ಕೇಂದ್ರ ಆಯುಷ್ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ 100 ಜನರಿಕ್ ಔಷಧಾಲಯಗಳು ಮಂಜೂರುಗೊಂಡಿದೆ. ಇದರಿಂದಾಗಿ ಕಡಿಮೆ ಬೆಲೆಯಲ್ಲಿ ಔಷಧಗಳು ಲಭ್ಯವಾಗಲಿವೆ ಎಂದ ಸಂಸದ ನಳಿನ್, ಮುದ್ರಾ ಬ್ಯಾಂಕ್ ಯೋಜನೆಯಡಿ 36500 ಖಾತೆಗಳನ್ನು ತೆರೆಯಲಾಗಿದೆ. 600 ಕೋಟಿ ರೂ. ಸಾಲವನ್ನು ನೀಡಲಾಗಿರುವುದು ದಾಖಲೆ ಎಂದರು.
ಪುತ್ತೂರಿನಂತೆ ಬಂಟ್ವಾಳ ರೈಲು ನಿಲ್ದಾಣ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದರು.
ಶಿರಾಡಿ ಎರಡನೇ ಹಂತದ ಕಾಮಗಾರಿ ಈ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳುವುದು. ರಸ್ತೆ ಬ್ಲಾಕ್ ಮಾಡದಂತೆ ಸಣ್ಣ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಮೇ ಅಂತ್ಯದೊಳಗೆ ರೈಲು ಫಾಸ್ಟ್
ಮಂಗಳೂರು-ಹಾಸನ-ಬೆಂಗಳೂರು ಮಧ್ಯೆ ಓಡುವ ರೈಲು ವೇಗವರ್ಧನೆಗೆ ಇದ್ದ ಅಡೆತಡೆ ನಿವಾರಣೆಯಾಗಿದ್ದು, ಮುಂದಿನ ಮೇ ಅಂತ್ಯದೊಳಗೆ ಹಾಸನದಿಂದ ಬೆಂಗಳೂರಿಗೆ ನೇರಯಾನ ಸಾಧ್ಯವಾಗಲಿದೆ. ಇದರಿಂದ ಮಂಗಳೂರಿಂದ ಬೆಂಗಳೂರಿಗೆ ರೈಲು ಬೇಗ ತಲುಪಲಿದೆ ಎಂದರು.
ಮೋದಿ ಸಾಧನೆಗೆ ಸಂಸದ ಸಂತಸ
ಕಾಳಧನ ಹೊರತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ದಿಢೀರ್ ನಿರ್ಧಾರವನ್ನು ಶ್ಲಾಘಿಸಿದ ಸಂಸದ ನಳಿನ್, ಭೂಸುಧಾರಣೆಯಂತೆ 500 ಮತ್ತು 1000 ನೋಟುಗಳ ನಿಷೇಧಿಸಿರುವ ದಿಟ್ಟ ಹೆಜ್ಜೆಯನ್ನಿಟ್ಟಿರುವುದನ್ನು ದೇಶವೇ ಕೊಂಡಾಡುತ್ತಿದೆ ಎಂದರು.
ಈ ಕುರಿತು ಜನರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ಅಪಪ್ರಚಾರಕ್ಕೆ ಕಿವಿಗೊಡದಿರುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಲಿದೆ ಎಂದು ತಜ್ಞರೇ ತಿಳಿಸಿರುವುದಾಗಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಒತ್ತುವರಿ ತೆರವುಗೊಳಿಸಿ, ತಿರುವುಗಳನ್ನು ಸರಿಪಡಿಸಿ, ಬಸ್ ಬೇ ಮಾಡುವ ಮೂಲಕ ಅಭಿವೃದ್ಧಿಗೊಳಿಸಲಾಗುವುದು. ಬಿ.ಸಿ.ರೋಡಿನ ಹದಗೆಟ್ಟ ರಸ್ತೆ ಕಾಂಕ್ರೀಟೀಕರಣಗೊಳಿಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳೇಪಾಡಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಕೋಶಾಧಿಕಾರಿ ದಿನೇಶ್ ಭಂಡಾರಿ, ಪುರಸಭಾ ಸದಸ್ಯೆ ಸುಗುಣ ಕಿಣಿ ಮೊದಲಾದವರಿದ್ದರು.
Be the first to comment on "ಭಯದ ನೆರಳಲ್ಲಿ ಟಿಪ್ಪು ಜಯಂತಿ ಬೇಕೇ: ನಳಿನ್"