ವಿಟ್ಲ: ಅಳಿಕೆ ಸರ್ಕಾರಿ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯ ವಸತಿ ನಿಲಯಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅಳಿಕೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಸಹಾಯಕಿಯಾಗಿರುವ ಜ್ಯೋತಿ ಎಂಬವರು ಸೋಮವಾರ ತನ್ನ ವಸತಿ ನಿಲಯಕ್ಕೆ ಬಂದು ತೆರಳಿದ್ದರು. ಮಂಗಳವಾರ ಬೆಳಿಗ್ಗೆ ೯.೨೦ಕ್ಕೆ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಅವರು ಮನೆಯ ಕೋಣೆಯೊಳಗೆ ನೋಡಿದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕಪಾಟಿನಲ್ಲಿ ನೋಡಿದಾಗ ಅದರಲ್ಲಿದ್ದ ಎರಡುವರೆ ಪವನ್ ಕನಕ ಮಾಲೆ, ಎರಡುವರೆ ಪವನ್ ಮುತ್ತಿನ ಮಾಲೆ, ಎರಡು ಉಂಗುರ, ಎರಡು ಮಗುವಿನ ಬಳೆ, ಒಂದೂವರೆ ಪವನ್ ಚೈನ್, ಒಂದುವರೆ ಪವನ್ ಕಿವಿ ಓಲೆ, ಅರ್ಧ ಪವನ್ ಮಗುವಿನ ಕಿವಿಯ ಚಿನ್ನ ಸೇರಿದಂತೆ ಒಟ್ಟು 14 ಪವನ್‌ರಷ್ಟು ಚಿನ್ನಾಭರಣಗಳು ನಾಪತ್ತೆಯಾಗಿತ್ತು. ತಕ್ಷಣವೇ ಅವರು ಈ ಬಗ್ಗೆ ತನ್ನ ಪತಿ ಸುನೀಲ್ ಹಾಗೂ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಮುಂಭಾಗಿಲಿನ ಬೀಗವನ್ನು ಮುರಿದ ಕಳ್ಳರು ಒಳನುಗ್ಗಿ ಈ ಕೃತ್ಯ ಎಸೆಗಿದ್ದಾರೆನ್ನಲಾಗಿದೆ. ಸ್ಥಳಕ್ಕೆ ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು, ಮಂಗಳೂರು ಬೆರಳಚ್ಚು ತಂಙ್ಞರು ಹಾಗೂ ಶ್ವಾನದಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಶ್ವಾನದಳ ಸುಮಾರು 200 ಮೀಟರ್‌ರಷ್ಟು ದೂರ ಓಡಿ ಕಳ್ಳರು ಕೃತ್ಯ ಎಸೆಗಿ ಪರಾರಿಯಾಗಿರುವ ಸ್ಥಳವನ್ನು ಗುರುತಿಸಿದೆ. ಪರಿಚಿತರೇ ಈ ಕೃತ್ಯ ಎಸೆಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Be the first to comment on "ವಸತಿ ನಿಲಯಕ್ಕೆ ನುಗ್ಗಿದ ಕಳ್ಳರು"