ಬಂಟ್ವಾಳ: ಧರ್ಮ ಪ್ರಜ್ಞೆಯ ನಡವಳಿಕೆಯಿಂದ ಎಲ್ಲರಿಗೂ ಕ್ಷೇಮ. ನಾನು ನನ್ನದು ನನ್ನಿಂದಾದು ಎಂಬ ಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನ ಸಿಗುತ್ತದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಪಾಣೆಮಂಗಳೂರು ಶ್ರೀ ನರಹರಿ ಪರ್ವತ ಸದಾಶಿವ ನವೀಕೃತ ದೇವಾಲಯ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಆರ್ಶಿವಚನ ನೀಡಿ, ಪ್ರಕೃತಿಯನ್ನು ಬಿಟ್ಟು ಭಗವಂತನಿಲ್ಲ. ನರಹರಿ ಪರ್ವತದ ಸುಂದರ ಪರಿಸರದಲ್ಲಿ ಸದಾಶಿವ ದೇವಾಲಯ ನಿರ್ಮಾಣದ ಮೂಲಕ ಭಕ್ತಿಯ ಸಂಚಯನವಾಗಲಿ, ಸರ್ವರ ಆತ್ಮೋದ್ಧಾರಕ್ಕೆ ಪೂರಕವಾಗಲಿ ಎಂದರು.
ಇಂಟರ್‌ನೆಟ್‌ನಲ್ಲಿ ಓಪನ್ ಮಾಡಿದರೆ ಪ್ರಪಂಚ ದರ್ಶನವಾಗುತ್ತದೆ. ಇನ್ನರ್‌ನೆಟ್ ಓಪನ್ ಮಾಡಿದರೆ ಭಗವಂತನ ದರ್ಶನವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ, ಶ್ರೀ ಕ್ಷೇತ್ರ ನರಹರಿ ಪರ್ವತದ ಗೌರವಾಧ್ಯಕ್ಷ ಬಿ. ರಮಾನಾಥ ರೈ ಶ್ರೀ ಕ್ಷೇತ್ರದ ನವೀಕೃತ ದೇವಾಲಯ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಶ್ರೀ ಕ್ಷೇತ್ರದ ನವೀಕೃತ ದೇವಾಲಯ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಪ್ರವಾಸಿ ಬಂಗಲೆ , ಸಾರ್ವಜನಿಕ ಶೌಚಾಲಯ ವ್ಯವಸ್ಥೆ ರಸ್ತೆ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡಲಾಗುವುದು. ದೇವರ ಸಂಪತ್ತಿನಲ್ಲಿ ನೂರರಲ್ಲಿ ಒಂದು ಅಂಶವನ್ನು ದೇವರ ಕಾರ್ಯಕ್ಕೆ ಸಮರ್ಪಣೆ ಮಾಡಿ ಸಹಕರಿಸಬೇಕು ಎಂದರು.
ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯsಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನಾಥ ಚೌಟ ಅತಿಥಿಯಾಗಿ ಭಾಗವಹಿಸಿದ್ದರು. ಮಾಜಿ ಶಾಸಕ, ಉತ್ಸವ ಸಮಿತಿ ಅಧ್ಯಕ್ಷ ಎ.ರುಕ್ಮಯ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಭಾಸ್ಕರ ಮಾರ್ಲರ ಪ್ರಯತ್ನದಿಂದ ದೇವಸ್ಥಾನ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ. ಶ್ರೀಕ್ಷೇತ್ರದ ನವೀಕೃತ ದೇವಾಲಯವು ರೂ. 5 ಕೋಟಿ ಅಂದಾಜು ವೆಚ್ಚದಲ್ಲಿ ಶಿಲಾಮಯವಾದ ಗರ್ಭ ಗುಡಿ, ಸುತ್ತು ಪೌಳಿ, ತೀರ್ಥ ಮಂಟಪ, ಸಭಾಭವನ, ಭೋಜನ ಶಾಲೆ ಹಾಗೂ ಪಾಕ ಶಾಲೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಡಾ.ಪ್ರಶಾಂತ್ ಮಾರ್ಲ ಸ್ವಾಗತಿಸಿದರು. ಅಧ್ಯಕ್ಷ ಡಾ.ಆತ್ಮರಂಜನ್ ರೈ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಜಿ.ನರೇಂದ್ರ ಬಾಬು ವಂದಿಸಿದರು. ಶ್ರೀನಿವಾಸ ಮೆಲ್ಕಾರ್ ನಿರೂಪಿಸಿದರು.
Be the first to comment on "ಅಹಂಕಾರ ಶೂನ್ಯವಾದಾಗ ಆತ್ಮ ಜ್ಞಾನ"