ಬಂಟ್ವಾಳ: ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವೇದಿಕೆ ಅಭಿರುಚಿ ಜೋಡುಮಾರ್ಗ ಆಶ್ರಯದಲ್ಲಿ, ಅಯನಾ ಮೂಡುಬಿದಿರೆ ತಂಡ ಅ.30ರ ಶುಕ್ರವಾರ ಸಂಜೆ 6.30ಕ್ಕೆ ಏಕವ್ಯಕ್ತಿ ನಾಟಕ ಊರ್ಮಿಳಾ ಪ್ರದರ್ಶನವನ್ನು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನೀಡಲಿದೆ.
ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ರಚಿಸಿ , ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ನಿರ್ದೇಶಿಸಿದ, ಸ್ತ್ರೀ ಸಂವೇದನೆಯ ಈ ನಾಟಕದಲ್ಲಿ ಮೂಡುಬಿದಿರೆಯ ಕಲಾವಿದೆ ವಿದುಷಿ ಅಯನಾ.ವಿ. ರಮಣ್ ಅಭಿನಯಿಸಲಿದ್ದಾರೆ ಎಂದು ‘ಅಭಿರುಚಿ’ಯ ಪ್ರಕಟಣೆ ತಿಳಿಸಿದೆ.
ವಿಶೇಷ ಆಹ್ವಾನಿತರಾಗಿ ಪಾಣೆಮಂಗಳೂರಿನ ಶ್ರೀ ವೀರ ವಿಠಲ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮೀ, ಎನ್. ಪ್ರಮೋದ್ ಭಟ್ ದಂಪತಿ, ತಾಲೂಕು ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ್, ಸಂಸ್ಕಾರ ಭಾರತಿಯ ದ.ಕ. ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಶಿಕ್ಷಣ ಸೌರಭ ರಾಷ್ಟ್ರ ಪ್ರಶಸ್ತಿ ವಿಜೇತ ಜಯಾನಂದ ಪೆರಾಜೆ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ ಬಂಟ್ವಾಳ್, ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಸೀತಾರಾಮ ಭಟ್, ಸಾವಿತ್ರಿ ದಂಪತಿ, ಉದ್ಯಮಿಗಳಾದ ಮೈತ್ರಿ, ಮೋಹನ್ ಪೈ ಮಾಣಿ , ಮತ್ತು ಪುಷ್ಪಲತಾ, ಎಂ.ಎನ್. ಕುಮಾರ್ ಮೆಲ್ಕಾರ್ ಭಾಗವಹಿಸಲಿದ್ದಾರೆ.
ವಿಶಿಷ್ಟ ರಂಗಪ್ರಯೋಗವನ್ನು ವೀಕ್ಷಿಸಿ, ಇದರ ಕುರಿತಾಗಿ ಒಂದೆರಡು ಪುಟಗಳ ವಿಮರ್ಶೆ ಬರೆಯುವ ಬಗ್ಗೆ ಸ್ಥಳೀಯ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ನಾಟಕ ನಡೆಯುವ ದಿನ ‘ಅಭಿರುಚಿ ‘ಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು, ಇಲ್ಲವೇ 9632430012, 8277557765 ನಂಬರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ಆಸಕ್ತರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿರುವ ಈ 60 ನಿಮಿಷಗಳ ಅವಧಿ ಯ ನಾಟಕ ಪ್ರದರ್ಶನ ಸಮಯಕ್ಕೆ ಸರಿಯಾಗಿ ನಡೆಯಲಿದ್ದು ಬಳಿಕ ಸಂವಾದ ನಡೆಯಲಿದೆ ಎಂದು ಅಭಿರುಚಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.