ಬಂಟ್ವಾಳ ಪುರಸಭೆ ಲೆಕ್ಕಪರಿಶೋಧನಾ ಆಕ್ಷೇಪಣೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು, ಕುಡಿಯವ ನೀರು ಹಾಗೂ ನಾಗರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ ಎಸ್.ಡಿ.ಪಿ.ಐ. ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಆಲಿ ಪೊನ್ನೋಡಿ, ಲೆಕ್ಕಪರಿಶೋಧನಾ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದು ಪರಿಶೀಲನೆ ನಡೆಸಿದಾಗ ಹಣಕಾಸು ನಿರ್ವಹಣೆ, ಜಿ.ಎಸ್.ಟಿ. ಪಾವತಿ ವಿಳಂಬ ಮತ್ತು ಟೆಂಡರ್ ಪ್ರಕ್ರಿಯೆ ಸಂಬಂಧಿಸಿದ ಆಕ್ಷೇಪಗಳು ಕಂಡುಬಂದಿವೆ. ಈ ಕುರಿತು ಜಿಲ್ಲಾಡಳಿತ ಮತ್ತು ಪೌರಾಡಳಿತ ಇಲಾಖೆ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಮತ್ತು ಪೌರಾಡಳಿತ ಇಲಾಖೆ ಈ ವಿಚಾರಗಳ ಕುರಿತು 30 ದಿನಗಳೊಳಗೆ ಪ್ರಾಥಮಿಕ ಪರಿಶೀಲನಾ ವರದಿ ಪ್ರಕಟಿಸಬೇಕು ಎಂದವರು ಒತ್ತಾಯಿಸಿದ್ದಾರೆ
2024-25ನೇ ಸಾಲಿನ ಲೆಕ್ಕಪರಿಶೋಧನಾ ಆಕ್ಷೇಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಜಿ.ಎಸ್.ಟಿ.ವಿಳಂಬದಿಂದ ಉಂಟಾದ ಬಡ್ಡಿಯ ಹೊರೆಗೆ ಕಾರಣರಾದವರ ಹೊಣೆಗಾರಿಕೆ ನಿಗದಿಪಡಿಸಬೇಕು. ಟೆಂಡರ್ ಪ್ರಕ್ರಿಯೆ ಆಕ್ಷೇಪಣೆಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆ ದೃಢಪಟ್ಟರೆ, ಕ್ರಮ ಕೈಗೊಳ್ಳಬೇಕು. ಹಿಂದಿನ ಸಮಗ್ರ ನೀರು ಸರಬರಾಜು ಯೋಜನೆ, ಅಮೃತ 2.0 ಯೋಜನೆ ಮಂಜೂರಾತಿ ಹಣ ಬಿಡುಗಡೆ, ವೆಚ್ಚ ಮತ್ತು ಕಾಮಗಾರಿ ಪ್ರಗತಿ ವಿವರ ಬಹಿರಂಗಪಡಿಸಬೇಕು. ನೀರು ಸೋರಿಕೆ, ನೀರು ಕೊರತೆ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಬೇಕು. ಬಿ.ಸಿ.ರೋಡ್ ವೃತ್ತದ ರಸ್ತೆ ಸುರಕ್ಷತಾ ಪರಿಶೀಲನೆ ನಡೆಸಿ, ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್, ಬೀದಿದೀಪ, ಪಾದಚಾರಿ ಸುರಕ್ಷತೆ ಮತ್ತು ಕಸ ನಿರ್ವಹಣೆಗೆ ಸಮಗ್ರ ಕಾರ್ಯಯೋಜನೆ ರೂಪಿಸಬೇಕು. ಲೆಕ್ಕಪರಿಶೋಧನಾ ಆಕ್ಷೇಪಣೆಗಳಿಗೆ ನೀಡಿರುವ ಉತ್ತರಗಳು, ಕೈಗೊಂಡ ಕ್ರಮಗಳ ವರದಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಚ್.ಎಸ್, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು, ಬಿ.ಸಿ.ರೋಡ್ ಸಿಟಿ ಸಮಿತಿ ಅಧ್ಯಕ್ಷ ಅನ್ವರ್ ಕೆ.ಎಚ್ ಮತ್ತು ಪಾಣೆಮಂಗಳೂರು ಸಿಟಿ ಸಮಿತಿ ಅಧ್ಯಕ್ಷ ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.