ಯಕ್ಷಗಾನ

ಯಕ್ಷಗಾನದ ಹಿರಿಯ ಕಲಾವಿದ ನಿಡ್ಲೆ ಗೋವಿಂದ ಭಟ್ಟರಿಗೆ ಪ್ರತಿಷ್ಠಿತ ‘ಮಂಡೆಚ್ಚ ಪ್ರಶಸ್ತಿ-2026’ ಗೌರವ

ಯಕ್ಷಗಾನದ ಹಿರಿಯ ಕಲಾವಿದ ನಿಡ್ಲೆ ಗೋವಿಂದ ಭಟ್ಟರಿಗೆ ಪ್ರತಿಷ್ಠಿತ ‘ಮಂಡೆಚ್ಚ ಪ್ರಶಸ್ತಿ-2026′ ಗೌರವ

ಕಟೀಲು: ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಾಗೂ ಹಿರಿಯ ವೇಷಧಾರಿ ನಿಡ್ಲೆ ಗೋವಿಂದ ಭಟ್ಟರು ಈ ಬಾರಿಯ ಪ್ರತಿಷ್ಠಿತ ‘ಮಂಡೆಚ್ಚ ಪ್ರಶಸ್ತಿ-2026’ಗೆ ಭಾಜನರಾಗಿದ್ದಾರೆ.

 ಖ್ಯಾತ ಭಾಗವತರಾಗಿದ್ದ ದಿವಂಗತ ವಿದ್ವಾನ್ ದಾಮೋದರ ಮಂಡೆಚ್ಚ ಅವರ ಸಂಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಗೋವಿಂದ ಭಟ್ಟರಿಗೆ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

ಜಾಹೀರಾತು

ಕಲಾಪಯಣ ಮತ್ತು ಸಾಧನೆ:

ಧರ್ಮಸ್ಥಳ ಲಲಿತಕಲಾ ಕೇಂದ್ರದ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಯಕ್ಷಗಾನ ಕಲಿಕೆಯನ್ನು ಆರಂಭಿಸಿದ ನಿಡ್ಲೆ ಗೋವಿಂದ ಭಟ್ಟರು, ಯಕ್ಷಗಾನದ ದಿಗ್ಗಜರಾದ ಕುರಿಯ ವಿಠ್ಠಲ ಶಾಸ್ತ್ರಿ ಹಾಗೂ ಪಡ್ರೆ ಚಂದು ಅವರ ಮಾರ್ಗದರ್ಶನ ಮತ್ತು ಶಿಷ್ಯತ್ವದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡರು.ಅವರು ಧರ್ಮಸ್ಥಳ, ಕೊಲ್ಲೂರು, ವೇಣೂರು, ಮುಂಬೈನ ಗೀತಾಂಬಿಕಾ ಯಕ್ಷಗಾನ ಮಂಡಳಿ, ಸುಬ್ರಹ್ಮಣ್ಯ, ಬಪ್ಪನಾಡು, ಪುತ್ತೂರು ಹಾಗೂ ಕರ್ನಾಟಕ ಮೇಳಗಳು ಸೇರಿದಂತೆ ವಿವಿಧ ಪ್ರಸಿದ್ಧ ಮೇಳಗಳಲ್ಲಿ ಸುದೀರ್ಘ 43 ವರ್ಷಗಳ ಕಾಲ ನಿರಂತರ ರಂಗಸೇವೆ (ತಿರುಗಾಟ) ಮಾಡಿದ್ದಾರೆ. ಇದರಲ್ಲಿ ಧರ್ಮಸ್ಥಳ ಮೇಳ ಒಂದರಲ್ಲೇ ಸುಮಾರು 30 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುವುದು ಅವರ ಅನನ್ಯ ಕಲಾ ಬದ್ಧತೆಗೆ ಸಾಕ್ಷಿಯಾಗಿದೆ.

ಅದ್ಭುತ ಪಾತ್ರ ಚಿತ್ರಣ:

ಪೌರಾಣಿಕ ಪ್ರಸಂಗಗಳ ವೈವಿಧ್ಯಮಯ ವೇಷಗಳನ್ನು ಅಭಿನಯಿಸಿ ಸೈ ಎನಿಸಿಕೊಂಡಿರುವ ಇವರು, ವಿಶೇಷವಾಗಿ ರಾವಣ, ಹಿರಣ್ಯಾಕ್ಷ, ಇಂದ್ರಜಿತು, ಮೈರಾವಣ, ಕೌರವ, ಅರ್ಜುನ, ಕರ್ಣ, ಜಮದಗ್ನಿ, ದಕ್ಷ, ಕಂಸ, ಕೌಂಡ್ಲಿಕ ಹಾಗೂ ಮಹಿಷಾಸುರ ಪಾತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆಯನ್ನು ಒತ್ತಿದ್ದಾರೆ.

ನಿಡ್ಲೆ ಗೋವಿಂದ ಭಟ್ಟರು ಕಳೆದ ನಾಲ್ಕು ದಶಕಗಳಿಂದ ಮಳೆಗಾಲದ ಅವಧಿಯಲ್ಲಿ ತಮ್ಮದೇ ಆದ ‘ನಿಡ್ಲೆ ಮೇಳ’ವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಯನ್ನು ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವ ಜೊತೆಗೆ, ನೂರಾರು ಕಲಾವಿದರಿಗೆ ಆಸರೆಯಾಗಿ ಅನ್ನದಾತರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ:

ಈಗಾಗಲೇ ಹಲವಾರು ರಾಜ್ಯ ಹಾಗೂ ಪ್ರಾದೇಶಿಕ ಪ್ರಶಸ್ತಿ-ಸನ್ಮಾನಗಳಿಗೆ ಭಾಜನರಾಗಿರುವ ಗೋವಿಂದ ಭಟ್ಟರಿಗೆ, ಅಕ್ಟೋಬರ್ 31ರಂದು ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ‘ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣ ಕಾರ್ಯಕ್ರಮ’ದಲ್ಲಿ ‘ಮಂಡೆಚ್ಚ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

VNR GOLD
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.