ಬಂಟ್ವಾಳ: ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಬುಧವಾರ ಮಧ್ಯಾಹ್ನ ಸ್ವರ್ಣ ಅಕಾಡೆಮಿ ಲರ್ನಿಂಗ್ ಸೆಂಟರ್ನ ಪುಟಾಣಿ ಮಕ್ಕಳಿಂದ ಯಕ್ಷಗುರು ನರಸಿಂಹ ಮಯ್ಯ ಅವರ ನಿರ್ದೇಶನದಲ್ಲಿ ನಡೆದ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿ ಕಲಾಭಿಮಾನಿಗಳ ಮನಸೂರೆಗೊಂಡಿತು.
ತಾಳಮದ್ದಳೆಯಲ್ಲಿ ಮಕ್ಕಳ ಮಾತುಗಾರಿಕೆ ಆಕರ್ಷಕವಾಗಿದ್ದು, ಗುರುಗಳು ನೀಡಿದ ತರಬೇತಿ ಹಾಗೂ ಅಭ್ಯಾಸದ ಕ್ರಮಗಳು ಪ್ರಶಂಸನೀಯವಾಗಿದ್ದವು. ಶಿಕ್ಷಣ ಸಂಸ್ಥೆಯ ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು. ಸಾಲುಸಾಲಾಗಿ ಶಿಸ್ತಿನಿಂದ ಸಾಗುವುದು, ವೇದಿಕೆಯಿಂದ ಪ್ರೇಕ್ಷಕರಿಗೆ ನಮಸ್ಕರಿಸುವುದು ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ಮಕ್ಕಳ ಶಿಸ್ತು, ಸಂಯಮ ಹಾಗೂ ತಮಗೆ ವಹಿಸಿದ ಪಾತ್ರಗಳ ಬಗೆಗಿನ ಗಂಭೀರತೆ ಎದ್ದು ಕಾಣುತ್ತಿತ್ತು.
ಯಕ್ಷಗಾನದಲ್ಲಿ ವೇಷಭೂಷಣ ಮತ್ತು ಕುಣಿತ ಪ್ರಮುಖ ಆಕರ್ಷಣೆಯಾದರೆ, ತಾಳಮದ್ದಳೆಯಲ್ಲಿ ಮಾತುಗಾರಿಕೆ, ಅರ್ಥಗಾರಿಕೆ ಹಾಗೂ ಪಾತ್ರಾಭಿವ್ಯಕ್ತಿಯೇ ಮುಖ್ಯ. ಈ ಸವಾಲನ್ನು ಮಕ್ಕಳು ಸಮರ್ಥವಾಗಿ ನಿಭಾಯಿಸಿದ್ದು, ತಮ್ಮ ಪಾತ್ರಗಳಿಗೆ ತಕ್ಕ ಮಾತುಗಾರಿಕೆ, ಭಾವಪ್ರಕಟನೆ ಮತ್ತು ವಿಚಾರ ಮಂಡನೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದರು.
ಮಕ್ಕಳ ತಾಳಮದ್ದಳೆ ಎಂಬ ಭಾವನೆಯೊಂದಿಗೆ ಪ್ರೇಕ್ಷಕರು ಕುಳಿತಿದ್ದರೂ, ವೇದಿಕೆಯಲ್ಲಿ ಮಕ್ಕಳು ಮಕ್ಕಳಾಗಿ ಕಾಣದೆ, ಪ್ರಸಂಗದ ಪಾತ್ರಧಾರಿಗಳಾಗಿಯೇ ಮೂಡಿಬಂದದ್ದು ವಿಶೇಷವಾಗಿತ್ತು. ಪಾತ್ರಗಳ ಸ್ವರೂಪವನ್ನು ಅರಿತು, ಅದಕ್ಕೆ ತಕ್ಕಂತೆ ಗಂಭೀರವಾಗಿ ಮಾತನಾಡಿದ ಅವರ ಶೈಲಿ ಮೆಚ್ಚುಗೆಗೆ ಪಾತ್ರವಾಯಿತು.
ಮಕ್ಕಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ತರಬೇತಿ ನೀಡಿ ವೇದಿಕೆಗೆ ಪರಿಚಯಿಸಿದ ಯಕ್ಷಗುರು ನರಸಿಂಹ ಮಯ್ಯ ಅವರ ಶ್ರಮ ಇಲ್ಲಿ ಸಾರ್ಥಕಗೊಂಡಿತು. ಇಂತಹ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮುಂದುವರಿದರೆ, ಮಕ್ಕಳು ಭವಿಷ್ಯದಲ್ಲಿ ಉತ್ತಮ ತಾಳಮದ್ದಳೆ ಕಲಾವಿದರಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ.
ಈ ಪುಟಾಣಿ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅವಕಾಶಗಳು ದೊರೆಯಲಿ. ನಿರಂತರ ಅಭ್ಯಾಸ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ಯಕ್ಷಗಾನದ ಶ್ರೀಮಂತ ಕಲಾಪರಂಪರೆಯನ್ನು ಮುಂದುವರಿಸುವ ಸಮರ್ಥ ಕಲಾವಿದರಾಗಿ ಬೆಳೆಯಲಿ ಎಂಬುದು ಕಲಾಭಿಮಾನಿಗಳ ಆಶಯ.
-YADAV KULAL AGRABAIL