ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ. ಪುತ್ತೂರು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1.31 ಕೋಟಿ ರೂ ಗಳನ್ನು ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಲಾಗಿದೆ. ಮಂಗಳೂರಿನ ಸಿಸಿಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ ಪೊಲೀಸ್ ಹಾಗೂ ಎಟಿಎಸ್ ಅಧಿಕಾರಿಗಳೆಂದು ಸುಳ್ಳು ಗುರುತು ಹೇಳಿಕೊಂಡು, ‘ಡಿಜಿಟಲ್ ಅರೆಸ್ಟ್’ ನೆಪದಲ್ಲಿ ಪುತ್ತೂರು ತಾಲೂಕಿನ ನಿವಾಸಿಯೊಬ್ಬರಿಗೆ1.31 ಕೋಟಿ ರೂಗೂ ಅಧಿಕ ಹಣ ವಂಚಿಸಿರುವ ಕೃತ್ಯವಿದು.
ಅಪರಿಚಿತ ದುಷ್ಕರ್ಮಿಗಳು ದೂರುದಾರರನ್ನು ಸಂಪರ್ಕಿಸಿ, ತಾವು ಮುಂಬೈ ಪೊಲೀಸ್ ಮತ್ತು ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. “ನಿಮ್ಮ ಬ್ಯಾಂಕ್ ಖಾತೆಯಿಂದ ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆಯಾಗಿದೆ” ಎಂದು ಗಂಭೀರ ಸುಳ್ಳು ಆರೋಪ ಹೊರಿಸಿ, ತಕ್ಷಣ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ನಂತರ ಆರೋಪಿಗಳು ವಾಟ್ಸಾಪ್ ವೀಡಿಯೋ ಕರೆಗಳ ಮೂಲಕ ದೂರುದಾರರನ್ನು ನಿರಂತರವಾಗಿ ಸಂಪರ್ಕದಲ್ಲಿದ್ದು, ಸುಳ್ಳು ತನಿಖೆಯ ನಾಟಕವಾಡಿದ್ದಾರೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ, ಪ್ರಕರಣದಿಂದ ಪಾರಾಗಬೇಕಾದರೆ ತಮ್ಮ ಸೂಚಿತ ಖಾತೆಗಳಿಗೆ ಹಣ ವರ್ಗಾಯಿಸಬೇಕೆಂದು ಭೀತಿ ಹುಟ್ಟಿಸಿದ್ದಾರೆ.
ಇದನ್ನು ನಿಜವೆಂದು ನಂಬಿದ ದೂರುದಾರರು ಸೆ.2ರಿಂದ ಅಕ್ಟೋಬರ್ 6 ರವರೆಗೆ ಹಂತ-ಹಂತವಾಗಿ ಆರ್.ಟಿ.ಜಿ.ಎಸ್. ಮೂಲಕ ಒಟ್ಟು 1,31,50,000 ಹಣವನ್ನು ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ನಂತರ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ತಕ್ಷಣವೇ ಸೈಬರ್ ಸಹಾಯವಾಣಿ 1930 ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಈ ದೂರಿನನ್ವಯ ದಕ್ಷಿಣ ಕನ್ನಡ ಸಿ.ಸಿ.ಪಿ.ಎಸ್ (CCPS) ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಬಿ.ಎನ್.ಎಸ್ (BNS) ವಿವಿಧ ತೀವ್ರ ಸ್ವರೂಪದ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸೈಬರ್ ಅಪರಾಧಿಗಳು ಇತ್ತೀಚೆಗೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಹಣ ದೋಚಲು ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ತಂತ್ರವನ್ನು ಬಳಸುತ್ತಿದ್ದಾರೆ. ನಾಗರಿಕರು ಈ ಕೆಳಗಿನ ಪ್ರಮುಖ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕು:
ಕಾನೂನು ಜಾರಿ ಸಂಸ್ಥೆಗಳಾದ ಪೊಲೀಸ್, ಸಿಬಿಐ (CBI), ಇಡಿ (ED), ಐಟಿ (Income Tax) ಅಥವಾ ಎಟಿಎಸ್ (ATS) ಯಾವುದೇ ವ್ಯಕ್ತಿಯನ್ನು ವೀಡಿಯೋ ಕರೆಗಳ (WhatsApp, Skype, Call) ಮೂಲಕ ತನಿಖೆ ನಡೆಸುವುದಿಲ್ಲ ಅಥವಾ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ.
ಸಿಬಿಐ, ಮುಂಬೈ ಪೊಲೀಸ್ ಅಥವಾ ಕಸ್ಟಮ್ಸ್ ಅಧಿಕಾರಿಗಳ ಹೆಸರು ಹೇಳಿ ವೀಡಿಯೋ ಕರೆ ಮಾಡಿ ಬೆದರಿಕೆ ಹಾಕಿದರೆ ತಕ್ಷಣ ಕರೆ ಕಟ್ ಮಾಡಿ.
ಸರ್ಕಾರಿ ಅಧಿಕಾರಿಗಳು ಯಾರೂ ತಮ್ಮ ಖಾತೆಗೆ ಅಥವಾ ಯಾವುದೇ ಖಾಸಗಿ ಬ್ಯಾಂಕ್ ಖಾತೆಗೆ “ಪರಿಶೀಲನೆಗಾಗಿ” ಹಣ ಹಾಕಿ ಎಂದು ಎಂದಿಗೂ ಕೇಳುವುದಿಲ್ಲ.
ತ್ವರಿತ ಸಹಾಯಕ್ಕಾಗಿ ಸಂಕಷ್ಟ ಸಂಖ್ಯೆಗೆ ಕರೆ ಮಾಡಿ:
ನೀವು ಅಥವಾ ನಿಮ್ಮವರು ಸೈಬರ್ ವಂಚನೆಗೆ ಒಳಗಾದರೆ, ತಕ್ಷಣವೇ 1930 ಸೈಬರ್ ಕ್ರೈಮ್ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ಸೈಬರ್ ಅಪರಾಧ ನಡೆದ ಮೊದಲ 1 ಗಂಟೆಯೊಳಗೆ (Golden Hour) ದೂರು ನೀಡಿದರೆ ಹಣವನ್ನು ತಡೆಯುವ (Freeze) ಸಾಧ್ಯತೆ ಹೆಚ್ಚಿರುತ್ತದೆ.