ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (MIA) ಮೂಲಕ ನಡೆಯುತ್ತಿದ್ದ ಅಕ್ರಮ ಚಿನ್ನ ಕಳ್ಳಸಾಗಣೆ ಹಾಗೂ ವಿದೇಶದಿಂದ ಸಿಂಥೆಟಿಕ್ ಮಾದಕವಸ್ತು ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಮಂಗಳೂರು ಪ್ರಾದೇಶಿಕ ಘಟಕ ಯಶಸ್ವಿಯಾಗಿ ಭೇದಿಸಿದೆ.
ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು ₹3.77 ಕೋಟಿ ಮೌಲ್ಯದ 2.95 ಕೆ.ಜಿ ವಿದೇಶಿ ಚಿನ್ನ, ₹73 ಲಕ್ಷ ನಗದು, ವಾಹನಗಳು ಹಾಗೂ 1.33 ಕೆ.ಜಿ ನಿಷೇಧಿತ ‘ಆಂಫೆಟಮೈನ್’ (Amphetamine) ಮಾದಕವಸ್ತುವನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಡಿಆರ್ಐ ಉಪ ನಿರ್ದೇಶಕ ಕಂಕಣಾಲ ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಚರಣೆಯ ಪ್ರಮುಖ ಅಂಶಗಳು:
1. ಶೌಚಾಲಯದ ಮೂಲಕ ಚಿನ್ನ ಸಾಗಾಟ: ₹2 ಕೋಟಿ ಚಿನ್ನ, ₹73 ಲಕ್ಷ ನಗದು ಜಪ್ತಿ ದುಬೈ ಮತ್ತು ಕಾಸರಗೋಡು ಮೂಲದ ಸ್ಮಗ್ಲರ್ಗಳೊಂದಿಗೆ ಶಾಮೀಲಾಗಿ ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಚಿನ್ನ ಕಳ್ಳಸಾಗಣೆಗೆ ನೆರವಾಗುತ್ತಿದ್ದರು. ಯುಎಇಯಿಂದ ಬರುವ ಅಪರಿಚಿತ ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್ ಸಮೀಪದ ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದ ಚಿನ್ನವನ್ನು ಈ ಸಿಬ್ಬಂದಿ ಹೊರತೆಗೆದು ಸಾಗಿಸುತ್ತಿದ್ದರು.
2. ದೇಹದ ಒಳಭಾಗದಲ್ಲಿ ಚಿನ್ನ ಅಡಗಿಸಿ ತಂದ ಇಬ್ಬರ ಸೆರೆ (₹1.77 ಕೋಟಿ ಮೌಲ್ಯ) ನವೆಂಬರ್ 14ರಂದು ದುಬೈನಿಂದ ಬಂದಿಳಿದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ತಮ್ಮ ಗುದದ್ವಾರದಲ್ಲಿ ಐದು ಕ್ಯಾಪ್ಸೂಲ್ಗಳಲ್ಲಿ ಪೇಸ್ಟ್ ರೂಪದ ಚಿನ್ನವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಆರೋಪಿಗಳಿಂದ ₹1.77 ಕೋಟಿ ಮೌಲ್ಯದ 1,306 ಗ್ರಾಂ (1.30 ಕೆ.ಜಿ) ವಿದೇಶಿ ಚಿನ್ನವನ್ನು ವಶಪಡಿಸಿಕೊಂಡು ಬಂಧಿಸಲಾಗಿದೆ.
3. ಏರ್ಪೋರ್ಟ್ನಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಸಿಂಥೆಟಿಕ್ ಡ್ರಗ್ಸ್ ಪತ್ತೆ! ಮಸ್ಕತ್ನಿಂದ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ಪ್ರಯಾಣಿಕನ ಚೆಕ್-ಇನ್ ಬ್ಯಾಗೇಜ್ ಪರಿಶೀಲಿಸಿದ ಕಸ್ಟಮ್ಸ್ ಮತ್ತು ಡಿಆರ್ಐ ಅಧಿಕಾರಿಗಳಿಗೆ ಆಘಾತ ಕಾದಿತ್ತು. ಚಿಪ್ಸ್ ಪ್ಯಾಕೆಟ್ಗಳ ಒಳಗೆ ಬಚ್ಚಿಟ್ಟಿದ್ದ 14 ಪ್ಯಾಕೆಟ್ಗಳಲ್ಲಿ 1,333 ಗ್ರಾಂ (1.33 ಕೆ.ಜಿ) ಹರಳಿನ ರೂಪದ ‘ಆಂಫೆಟಮೈನ್’ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ. ತಕ್ಷಣ ಮುಂದುವರಿದ ಕಾರ್ಯಾಚರಣೆಯಲ್ಲಿ, ಈ ಮಾದಕವಸ್ತು ಹಸ್ತಾಂತರಿಸಿದ್ದ ಕೇರಳದ ಮುನ್ನಾರ್ ಮೂಲದ ಮತ್ತೊಬ್ಬ ಆರೋಪಿಯನ್ನೂ ಬಂಧಿಸಿ, ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಸಿಂಥೆಟಿಕ್ ಡ್ರಗ್ಸ್ ಸಾಗಿಸುತ್ತಿದ್ದ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು ಎಂದು ಡಿಆರ್ಐ ಸ್ಪಷ್ಟಪಡಿಸಿದೆ.