ವ್ಯಕ್ತಿತ್ವ ವಿಕಸನ ಶಿಬಿರಗಳು ಯುವಜನರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಶಿಸ್ತು ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಶಿಬಿರಗಳ ಮೂಲಕ ಯುವಜನರು ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾಗುವ ನಾಯಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ಯುವವಾಹಿನಿ ರಜತ ವರ್ಷದ ಅಧ್ಯಕ್ಷರು ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಹೇಳಿದರು.
ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾದ ವಿಷನ್ 2026 ‘ಯುವಕರ ದೃಷ್ಟಿಕೋನ’ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಉದ್ಯಮಿ ಲೋಕೇಶ್ ಸುವರ್ಣ ಜಕ್ರಿಬೆಟ್ಟು ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ವ್ಯಕ್ತಿತ್ವ ವಿಕಸನ ತರಬೇತುದಾರ ಸ್ಮಿತೇಶ್ ಎಸ್. ಬಾರ್ಯ ಮಾತನಾಡಿ, ಅವಕಾಶಗಳಿಗಾಗಿ ಕಾಯುವುದಕ್ಕಿಂತ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲುಗಳನ್ನು ಅಂತ್ಯವೆಂದು ಭಾವಿಸದೆ, ಅವುಗಳನ್ನು ಅನುಭವದ ಪಾಠಗಳಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್‌ರಾಜ್ ಪೂಂಜರಕೋಡಿ ಅಧ್ಯಕ್ಷತೆ ವಹಿಸಿದ್ದರು. ವ್ಯಕ್ತಿತ್ವ ವಿಕಸನ ನಿರ್ದೇಶಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಗೀತಾ ಜಗದೀಶ್ ವಂದಿಸಿದರು. ಕಿರಣ್‌ರಾಜ್ ಪೂಂಜರಕೋಡಿ ಕಾರ್ಯಕ್ರಮ ನಿರೂಪಿಸಿದರು.