ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ವತಿಯಿಂದ ಶನಿವಾರದ ಸಂತೆ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆರಂಭಗೊಳ್ಳಲಿದೆ. ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಕ್ಟೋಬರ್ 17ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಾಲನೆ ನೀಡುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ನಿವೇಶನದ ಮಾಲಕ ಮತ್ತು ಉದ್ಯಮಿ ಗಿರೀಶ್ ಬಿ. ಸಾಲ್ಯಾನ್ ಉಪಸ್ಥಿತರಿರುವರು ಎಂದರು.
ತರಕಾರಿ, ಫ್ಯಾನ್ಸಿ, ಆಹಾರವಸ್ತುಗಳ ಸ್ಟಾಲ್ ಗಳು ಇಲ್ಲಿರಲಿವೆ. ಬೆಳಗ್ಗೆ 9ರಿಂದ ರಾತ್ರಿ 8ವರೆಗೆ ಸಂತೆ ನಡೆಯಲಿದೆ. ಸ್ಥಳೀಯರ ವ್ಯಾಪಾರ, ವಹಿವಾಟು ಉತ್ತೇಜನ ಹಾಗೂ ಸಾರ್ವಜನಿಕರಿಗೆ ಎಲ್ಲ ವಸ್ತುಗಳೂ ಒಂದೇ ಸೂರಿನಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸಂತೆ ನಡೆಯಲಿದೆ ಎಂದವರು ತಿಳಿಸಿದರು.
ಮೋಹನ ಸಾಲ್ಯಾನ್ ಮತ್ತು ಶ್ಯಾಮಲಾ ಮೋಹನ ಸಾಲ್ಯಾನ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭ ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ನಿರ್ದೇಶಕರಾದ ವಿಜಯಕುಮಾರಿ ಇಂದ್ರ, ಗಜೇಂದ್ರ ಪ್ರಭು, ಸುಧಾಕರ ಸಾಲ್ಯಾನ್, ಬಟ್ಯಪ್ಪ ಶೆಟ್ಟಿ, ಲೋಕೇಶ್ ಸುವರ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಉಪಸ್ಥಿತರಿದ್ದರು.