ಪ್ರಮುಖ ಸುದ್ದಿಗಳು

ಮಳೆ ನಿಂತಿದೆ…ಹೊಂಡಗಳ ಕಾಟಕ್ಕೆ ಮುಕ್ತಿ ಯಾವಾಗ? — bantwalnews publicvoice with video

ದಾರಿ ತಪ್ಪಿಸುವ ಹೊಂಡಗಳು —- ಬಂಟ್ವಾಳ ಪೇಟೆ, ಮೂಡುಬಿದಿರೆ ಸಾಗುವ ಮಾರ್ಗದಲ್ಲಿ ಕಂಗೆಡಿಸುವ ಗುಂಡಿಗಳು

ಮಳೆಗಾಲ ತಕ್ಕಮಟ್ಟಿಗೆ ಮುಗಿದಿದೆ, ಆದರೆ ರಸ್ತೆಯ ಮೇಲಿರುವ ಬೃಹತ್ ಹೊಂಡಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ನಾವು ಪ್ರತಿದಿನ ಸಂಚರಿಸುವಾಗ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ…” – ಇದು ಬಂಟ್ವಾಳ ಪೇಟೆ ಹಾಗೂ ಮೂಡುಬಿದಿರೆ ಮಾರ್ಗವಾಗಿ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರ ದೈನಂದಿನ ಅಳಲು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಂಟಕವಾದ ಗುಂಡಿಗಳು

ಲೊರೆಟ್ಟೊ ಭಾಗದಿಂದ ಬಂಟ್ವಾಳ ಪೇಟೆಗೆ ಆಗಮಿಸುವ ದಾರಿಯಲ್ಲಿ ಕನಿಷ್ಠ ನಾಲ್ಕು ಪ್ರಮುಖ ಶಾಲೆಗಳು, ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಿವೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಶಾಲಾ-ಕಾಲೇಜು ಬಸ್ಸುಗಳು, ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಬಿಡುವಿಲ್ಲದೆ ಸಂಚರಿಸುತ್ತವೆ.

ಜಾಹೀರಾತು

ಆದರೆ, ವರ್ಷಾರಂಭದಿಂದಲೂ ವಾಹನ ಚಾಲಕರ ದಿಕ್ಕು ತಪ್ಪಿಸುವಂತೆ ಆಯಕಟ್ಟಿನ ಜಾಗಗಳಲ್ಲೇ ದೊಡ್ಡ ದೊಡ್ಡ ಹೊಂಡಗಳು ಪ್ರತ್ಯಕ್ಷವಾಗಿವೆ. ಅಗಲ ಕಿರಿದಾಗಿರುವ ಈ ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಚಾಲಕರು ‘ರಾಂಗ್ ಸೈಡ್’ (ತಪ್ಪು ಬದಿ) ಗೆ ಚಲಿಸುತ್ತಿದ್ದು, ಎದುರಿನಿಂದ ವೇಗವಾಗಿ ಬರುವ ವಾಹನಗಳಿಗೆ ನೇರವಾಗಿ ಡಿಕ್ಕಿ ಹೊಡೆಯುವ ಅಪಾಯ ತಂದೊಡ್ಡಿದೆ.

ಇನ್ನು ಮುಂಗಾರು ಮಳೆಯ ಆರ್ಭಟ ಕಡಿಮೆಯಾಗಿದ್ದರೂ, ರಸ್ತೆಯನ್ನು ಸರಿಪಡಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. “ಇಷ್ಟೆಲ್ಲಾ ಸಮಸ್ಯೆ ಇದ್ದರೂ ರಸ್ತೆಯನ್ನು ಸುಸ್ಥಿತಿಗೆ ತರುವ ಕೆಲಸವನ್ನು ಯಾವಾಗ ಮಾಡುತ್ತೀರಿ?” ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪ್ರಮುಖ ಸ್ಥಳಗಳು:

1. ಕೊಟ್ರಮಣಗಂಡಿ ಬಸ್ ನಿಲ್ದಾಣ ಸಮೀಪ:

ಬಂಟ್ವಾಳದ ಕೊಟ್ರಮಣಗಂಡಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಕಾಂಕ್ರೀಟ್ ರಸ್ತೆ ಮತ್ತು ಡಾಂಬರು ರಸ್ತೆಯ ಸಂಧಿಸ್ಥಳದಲ್ಲಿ ಬಾವಿಯಂತೆ ಬಾಯಿ ತೆರೆದಿರುವ ಬೃಹತ್ ಗುಂಡಿಯಿದೆ. ಬಸ್‌ಗಳು ನಿಲ್ದಾಣಕ್ಕೆ ಬರುವಾಗ ಅಥವಾ ದ್ವಿಚಕ್ರ ವಾಹನಗಳು ಸಾಗುವಾಗ ಈ ಗುಂಡಿಯಲ್ಲಿ ಸಿಲುಕಿ ಈಗಾಗಲೇ ಹತ್ತಾರು ಸವಾರರು ಬಿದ್ದಿದ್ದಾರೆ

೨. ತುಂಬ್ಯ ಜಂಕ್ಷನ್ ಸಮೀಪ (ನಾಲ್ಕು ಮಾರ್ಗ ಸೇರುವ ಜಾಗ):

ಬಂಟ್ವಾಳದಿಂದ ಮೂಡುಬಿದಿರೆ ಕಡೆಗೆ ತೆರಳುವ ದಾರಿಯ ಆರಂಭದಲ್ಲೇ ಹಂಪ್‌ಗಳನ್ನು ಹಾಕಲಾಗಿದೆ. ಇಲ್ಲಿನ ಅಂಗಡಿಯೊಂದರ ಸಮೀಪ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ನಿಲ್ಲುತ್ತಾರೆ. ಆದರೆ ಹಂಪ್‌ನ ಎರಡೂ ಬದಿಗಳಲ್ಲಿ ರಸ್ತೆಯನ್ನೇ ಕೆತ್ತಿ ತೆಗೆದಂತೆ ಆಳವಾದ ಹೊಂಡಗಳು ನಿರ್ಮಾಣವಾಗಿವೆ. ಸಣ್ಣ ಮಳೆ ಬಂದರೂ ಕೆಸರು ನೀರು ತುಂಬಿಕೊಂಡು ‘ಕೆಸರಾಭಿಷೇಕ’ವಾಗುತ್ತದೆ. ಮೂಡುಬಿದಿರೆಗೆ ಸಾಗುವ ಪ್ರಯಾಣಿಕರು ಇದು ಮೂಡುಬಿದಿರೆಗೆ ಹೊಂಡಗಳ ಸ್ವಾಗತ!” ಎಂದು ವ್ಯಂಗ್ಯವಾಡುತ್ತಿದ್ದಾರೆ.

ಮಂಗಳೂರು ಸಂಪರ್ಕ ರಸ್ತೆಯಲ್ಲೂ ಅದೇ ಕಥೆ!

ಬಂಟ್ವಾಳ ಪೇಟೆ ಮತ್ತು ಮೂಡುಬಿದಿರೆ ರಸ್ತೆ ಮಾತ್ರವಲ್ಲದೆ, ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ವೃತ್ತ ದಾಟಿ ಮಂಗಳೂರು ಕಡೆಗೆ ಸಾಗುವ ಹೆದ್ದಾರಿಯಲ್ಲೂ ಸಣ್ಣ ಗುಂಡಿಗಳು ಅಡ್ಡಿಪಡಿಸುತ್ತಿವೆ. ಹೊಂಡಗಳನ್ನು ಮುಚ್ಚಿದರೂ, ಕೆಲವು ದಿನಗಳಲ್ಲೇ ಮತ್ತೆ ಅದೇ ಜಾಗದಲ್ಲಿ ಗುಂಡಿಗಳು ಪ್ರತ್ಯಕ್ಷವಾಗುತ್ತಿವೆ.

VNR GOLD

ಸ್ಥಳೀಯರು ಹಾಗೂ ಪ್ರಯಾಣಿಕರ ಮನವಿ:

ಸಂಬಂಧಪಟ್ಟ ಇಲಾಖೆ ಹಾಗೂ ಆಡಳಿತ ವ್ಯವಸ್ಥೆಯು ಯಾವುದೇ ದೊಡ್ಡ ಅಪಾಯ ಅಥವಾ ಪ್ರಾಣಹಾನಿ ಸಂಭವಿಸುವ ಮುನ್ನವೇ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಈ ಪ್ರಮುಖ ರಸ್ತೆಗಳಲ್ಲಿರುವ ಹೊಂಡಗಳನ್ನು ಮುಚ್ಚಿ ರಸ್ತೆ ದುರಸ್ತಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.for video click here

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Recent Posts