ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇವರ ಪೈಕಿ ಸಹಸವಾರ ಯಶವಂತ್ ಕುಲಾಲ್ ತೀವ್ರ ಗಾಯಗಳೊಂದಿಗೆ ಅಸು ನೀಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಸವಾರ ಗಾಯಾಳು ದಯಾನಂದ್ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಸಾಗುತ್ತಿದ್ದ ಟಿಪ್ಪರ್ ವಾಹನ ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುವ ದಾರಿಯಲ್ಲಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಸಹಸವಾರ ಯಶ್ವಂತ್ ಕುಲಾಲ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದು, ದಯಾನಂದ ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಚಾಲಕ ಸಲ್ಮಾನ್ ಫಾರೂಕ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.