ವಿಶ್ರಾಂತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರಾವಳಿ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ಇಳಿವಯಸ್ಸಿನಲ್ಲಿಯೂ ಮಾಡುತ್ತಿರುವ ಸೇವೆಗೆ ಬೆಲೆ ಕಟ್ಟಲಾಗದು ಎಂದು ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ ಭಟ್ ಹೇಳಿದರು.
ನಾರಾಯಣ ನಾಯಕ್ ಅವರು ಕಾಲೇಜಿನ ಬಡ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸಲಿಕ್ಕಾಗಿ ಐವತ್ತು ಸಾವಿರ ರೂಪಾಯಿಗಳ ದತ್ತಿನಿಧಿಯನ್ನು ಕೊಡುಗೆಯಾಗಿ ನೀಡಿದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. “ನಾರಾಯಣ ನಾಯಕ್ ಅವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ; ಅಂತಹ ಪ್ರಶಸ್ತಿಗಳ ಜೊತೆಗೆ ಅವರಿಗೆ ಸಂಘಸAಸ್ಥೆಗಳು ನೀಡಿದ ಮೊತ್ತಕ್ಕೆ ಅಷ್ಟೇ ಮೊತ್ತವನ್ನು ತಮ್ಮ ಸ್ವಂತ ಉಳಿತಾಯದಿಂದ ಸೇರಿಸಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಅವರು ನೀಡುತ್ತಾರೆ. ಈ ರೀತಿ ಎರಡು ಲಕ್ಷ ರೂಪಾಯಿಗಳನ್ನು ಕಳೆದ ಒಂದು ತಿಂಗಳಿನಲ್ಲಿಯೇ ಅವರು ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ನೀಡಿರುತ್ತಾರೆ. ವಿವಿಧ ಸರಕಾರಿ ಮತ್ತು ಖಾಸಗಿ ವಿದ್ಯಾರ್ಥಿವೇತನಗಳನ್ನು ವಿದ್ಯಾರ್ಥಿಗಳಿಗೆ ಕೊಡಿಸುವುದಷ್ಟೇ ಅಲ್ಲದೆ, ತಮ್ಮ ನಿವೃತ್ತಿವೇತನದ ಸುಮಾರು ಶೇ. ೬೦ಕ್ಕಿಂತಲೂ ಹೆಚ್ಚು ಮೊತ್ತವನ್ನು ಅವರು ಇಂತಹ ಸೇವಾಕಾರ್ಯಗಳಿಗಾಗಿ ಪ್ರತಿ ತಿಂಗಳು ವಿನಿಯೋಗಿಸುತ್ತಾರೆ” ಎಂದು ಅವರು ಹೇಳಿದರು.
ಸಮಾರಂಭದಲ್ಲಿ ನಾರಾಯಣ ನಾಯಕ್ ಅವರು ದತ್ತಿನಿಧಿ ಮೊತ್ತದ ಚೆಕ್ ಅನ್ನು ವಿದ್ಯಾರ್ಥಿ ನಾಯಕ ಹರೀಶ್ ಅವರಿಗೆ ಹಸ್ತಾಂತರಿಸಿ ಮಾತನಾಡುತ್ತ “ಯುವಜನತೆಯ ಮುಂದೆ ಅನೇಕ ಸವಾಲುಗಳಿದ್ದರೂ ಶ್ರದ್ಧೆ ಮತ್ತು ಪ್ರಯತ್ನವಿದ್ದರೆ ಏನನ್ನೂ ಸಾಧಿಸಬಹುದು; ದುಡಿಮೆಯ ಶ್ರದ್ಧೆಯೊಂದೇ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಇರುವ ದಾರಿ. ಇಂದು ಸಹಾಯ ಪಡೆದ ವಿದ್ಯಾರ್ಥಿಗಳು ತಾವು ಸ್ವಂತ ಕಾಲಿನ ಮೇಲೆ ನಿಂತ ಬಳಿಕ ತಮ್ಮ ಮುಂದಿನ ಪೀಳಿಗೆಗೆ ಸಹಾಯ ಮಾಡುವ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು. ಕಾಲೇಜಿನ ಬೋಧಕ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.