ಮಳೆಯಿಂದ ಸಮಸ್ಯೆಗಳು ಉಂಟಾದ ಹಿನ್ನೆಲೆಯಲ್ಲಿ ಬುಧವಾರ ಬಂಟ್ವಾಳಕ್ಕೆ ಆಗಮಿಸಿದ ಆರೋಗ್ಯ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಯು.ಟಿ.ಖಾದರ್ ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆಸಿ, ಮಳೆ ಹಾನಿ ಹಾಗೂ ಇಲಾಖಾವಾರು ಮಾಹಿತಿಯನ್ನು ಪಡೆದುಕೊಂಡರು.
ಅಧಿಕಾರಿಗಳು ಕೆಲವೊಮ್ಮೆ ಮಾನವೀಯ ದೃಷ್ಟಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಬುದ್ಧಿವಂತಿಕೆ ಜೊತೆಗೆ ಹೃದಯವಂತಿಕೆಯೂ ಇರಲಿ. ಸಚಿವರು, ಜನಪ್ರತಿನಿಧಿಗಳು ಬರಬೇಕು ಎಂದೇನೂ ಇಲ್ಲ. ಅಧಿಕಾರಿಗಳು ಪ್ರಜ್ಞಾವಂತರಾಗಿದ್ದರೆ, ಜನರ ಕೆಲಸ ಸುಲಭವಾಗುತ್ತದೆ. ಜನ ಮೆಚ್ಚುವಂಥ ಅಧಿಕಾರಿಗಳಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿಗಳಿಗೆ ಮೀಸಲಿರುವ ಸರಕಾರದ ಅನುದಾನವನ್ನು ಸಾರ್ವಜನಿಕ ಉದ್ದೇಶಕಷ್ಟೇ ಬಳಸಿ ಎಂದು ಗ್ರಾಪಂ ಪಿಡಿಒಗಳಿಗೆ ಕಿವಿಮಾತು ಹೇಳಿದ ಯು.ಟಿ.ಖಾದರ್, ಬಳಕೆಯಾಗುವ ನಿಧಿಯ ಕುರಿತು ನಿಗಾ ವಹಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರಿಗೆ ಸೂಚಿಸಿದರು.
ಜನ, ಜಾನುವಾರುಗಳಿಗೆ ಹಾವು ಕಚ್ಚಿದರೆ ತುರ್ತು ಚಿಕಿತ್ಸೆ ವ್ಯವಸ್ಥೆ ಅಗತ್ಯ, ಇದರ ಲಭ್ಯತೆ ಕುರಿತು ತಾಲೂಕು ಪಶುವೈದ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಎಲ್ಲ ಶಾಲೆಗಳಲ್ಲೂ ಬಸ್ ಗಳು ಸಮರ್ಪಕವಾದ ದಾಖಲೆಗಳನ್ನು ಹೊಂದಿರುವಂತೆ ಹಾಗೂ ನಿಯಮಪಾಲನೆ ಮಾಡುತ್ತಿವೆಯೇ ಎಂಬುದನ್ನು ನಿಗಾ ಇರಿಸಬೇಕು ಎಂದು ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎಚ್.ವಿ.ದರ್ಶನ್ ಮಾತನಾಡಿ, ತಾಲೂಕಿನಲ್ಲಿ ಮಳೆಯಿಂದಾಗಿ ಆಗಿರುವ ಹಾನಿಗಳು ಹಾಗೂ ಅವುಗಳಿಗೆ ನೀಡಿದ ಪರಿಹಾರದ ಕುರಿತು ವಿವರ ಕೇಳಿದರು. ಈ ಸಂದರ್ಭ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಮಾಜಿ ಸಚಿವ ಬಿ.ರಮಾನಾಥ ರೈ, ತಾಲೂಕು ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಉಪಸ್ಥಿತರಿದ್ದರು.
ಸಚಿವರ ಆಗಮನ ಹಿನ್ನೆಲೆಯಲ್ಲಿ ಹಲವು ಅಹವಾಲುಗಳನ್ನು ಸಾರ್ವಜನಿಕರು ನೀಡಿದರು. ಮಹಮ್ಮದ್ ನಂದಾವರ, ಸಮದ್, ಚಂದ್ರಶೇಖರ ಭಂಡಾರಿ, ಸಿದ್ದೀಕ್ ಗುಡ್ಡೆಯಂಗಡಿ ವಿವಿಧ ವಿಷಯಗಳ ಕುರಿತು ಮನವಿ ಮಾಡಿದರು.