ನಮ್ಮೂರು

ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆ ಬದಿ ಚರಂಡಿ ಮುಚ್ಚಳ ತೆರೆದುಕೊಂಡಿದೆ

| ಪಾಣೆಮಂಗಳೂರಿನಲ್ಲಿ ಈ ಸಮಸ್ಯೆ

ಇಲ್ಲಿ ನಡೆದುಕೊಂಡು ಹೋಗುವ ವೇಳೆ ನೆಲ ನೋಡದಿದ್ದರೆ, ಚರಂಡಿಗೆ ಬೀಳುವುದು ಗ್ಯಾರಂಟಿ.. ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿರುವ ಸರ್ವೀಸ್ ರಸ್ತೆಯ ಸ್ಥಿತಿ ಇದು. ಕಲ್ಲಡ್ಕದಲ್ಲೂ ಸ್ಥಿತಿ ಭಿನ್ನವೇನಿಲ್ಲ.

VNR GOLD

ಬಿ.ಸಿ.ರೋಡ್ ನಿಂದ ಕಲ್ಲಡ್ಕ ಕಡೆ ಸಾಗುವ ವೇಳೆ ಪಾಣೆಮಂಗಳೂರಿನಲ್ಲಿ ಅಂಡರ್ ಪಾಸ್ ಫ್ಲೈಓವರ್ ಇದೆ. ಇದರ ಬದಿಯಲ್ಲಿ ಸರ್ವೀಸ್ ರಸ್ತೆ ಇದ್ದು, ಇದು ನರಿಕೊಂಬು ಕ್ರಾಸ್, ಮೆಲ್ಕಾರ್ ಕಡೆಗೆ ಸಾಗುತ್ತದೆ. ಈ ರಸ್ತೆಯಂಚಿನಲ್ಲಿರುವ ಚರಂಡಿಗೆ ಮುಚ್ಚಳ ಹಾಕಲಾಗಿದ್ದು, ಅದು ಪಾದಚಾರಿಗಳಿಗೂ ಅನುಕೂಲವಾಗಿದೆ. ಆದರೆ ಕೆಲವೊಂದು ಭಾಗಗಳಲ್ಲಿ ಸ್ಲ್ಯಾಬ್ ನ ಸಿಮೆಂಟಿನ ಅಂಶಗಳು ಉದುರಿಹೋಗಿ ಕಬ್ಬಿಣದ ಸರಳುಗಳು ಕಂಡುಬಂದರೆ, ಕೆಲವೆಡೆ ಮುಚ್ಚಳವೇ ತೆರೆದುಕೊಂಡಿದೆ.

ಜಾಹೀರಾತು
PROBLEM IN PANEMANGALORE

ನರಿಕೊಂಬು ಕ್ರಾಸ್ ಕಡೆಯಿಂದ ಮೆಲ್ಕಾರ್ ಕಡೆಗೆ ಸಾಗುವ ವೇಳೆ ಎಡಭಾಗದಲ್ಲಿ ಹಲವು ಮಳಿಗೆಗಳು ಇವೆ. ಇಲ್ಲಿರುವ ಚರಂಡಿಗೆ ಸ್ಲ್ಯಾಬ್ ಮುಚ್ಚಳ ಹಾಕಲಾಗಿದೆ. ಆದರೆ ಅಲ್ಲಲ್ಲಿ ಮುಚ್ಚಳ ಕಿತ್ತುಹೋಗಿರುವುದು ಕಂಡುಬಂದರೆ, ಕೆಲವೆಡೆ ಸ್ಲಾಬ್ ಕುಸಿದುಬಿದ್ದಿದೆ. ಹೀಗಾಗಿ ನಡೆದುಕೊಂಡು ಹೋಗುವವರು ಸ್ವಲ್ಪ ಎಚ್ಚರ ವಹಿಸಿದರೂ ಸಮಸ್ಯೆ ಅನುಭವಿಸುವುದು ಖಚಿತ. ಮಳೆ ಬಂದಾಗ ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತದೆ. ನೀರು ತುಂಬಿದ ಜಾಗದಲ್ಲಿ ಕಾಲಿಡುವುದು ಎಲ್ಲಿ ಎಂದೇ ಗೊತ್ತಾಗುವುದಿಲ್ಲ.

PROBLEM AT PANEMANGALORE

ಕಲ್ಲಡ್ಕದ ಫ್ಲೈ ಓವರ್ ಕೆಳಗೆ ಇರುವ ಸರ್ವೀಸ್ ರಸ್ತೆಬದಿಯ ಪಾದಚಾರಿ ಮಾರ್ಗ ಬಹಳ‌ ಅಪಾಯಕಾರಿಯಾಗಿದೆ. ಅಲ್ಲಿ ಬೀದಿ ದೀಪ‌ ಇಲ್ಲ.‌ಅಂಗಡಿಯ ಬೆಳಕು, ಚಲಿಸುವ ವಾಹನಗಳ ಬೆಳಕು ಮಾತ್ರ ನಂಬಿಕೊಂಡು ರಾತ್ರಿ ಸಂಚರಿಸಬೇಕು. ಇಲ್ಲಿ ಕಾಲ್ನಡಿಗೆಯಲ್ಲಿ ಸಾಗುವ ವೇಳೆ ಕೆಲವೆಡೆ ಸ್ಲ್ಯಾಬ್ ಗಳು ಎದ್ದಿರುವುದು ಕಂಡುಬಂದಿದೆ. ಎಲ್ಲಿ ಕಬ್ಬಿಣದ ಸರಳು ಕಾಲಿಗೆ ಸಿಲುಕಿ ಅಥವಾ ಕಾಲು ಸರಳಿಗೆ ಸಿಲುಕಿ‌ ಮುಗ್ಗರಿಸಿ‌ ಬೀಳುತ್ತೇವೋ ಅನ್ನುವ ಭಯ ಕಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜತೆಗೆ ಅಲ್ಲಲ್ಲಿ ಆ ಸ್ಲ್ಯಾಬ್ ಒಡೆದಿದ್ದು, ನಡೆಯುವಾಗ ಸ್ವಲ್ಪ ಗಮನ ತಪ್ಪಿದರೂ ಕಾಲು ಗುಂಡಿಯಲ್ಲಿ ಸಿಲುಕುವ ಅಪಾಯ ಕಾದಿದೆ.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.