ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವಲ್ಲಿ ಮುಡಿಪು ಚಿತ್ತಾರ ಬಳಗವು ಅನುಷ್ಠಾನಗೊಳಿಸಿರುವ ಕಾರ್ಯಕ್ರಮವು ಇತರರಿಗೂ ಮಾದರಿಯಾಗಿದೆ ಎಂದು ಮಂಗಳೂರು ಪಂಪ್ವೆಲ್ ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ರಾಜೇಶ್ ಶೆಟ್ಟಿ ಶಬರಿ ಹೇಳಿದರು.
ಚಿತ್ತಾರ ಬಳಗದ ವತಿಯಿಂದ ಜನಶಿಕ್ಷಣ ಟ್ರಸ್ಟ್ ಮತ್ತು ಜನಜೀವನ ಬಾಳೆಪುಣಿ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದ್ದ ಆಸರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಡಿಪು ಜನಶಿಕ್ಷಣ ಟ್ರಸ್ಟ್ನ ಸರ್ವೋದಯ ಮಂಟಪದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಟ್ರಸ್ಟ್ ನ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಹಾಗೂ ಹಿರಿಯ ಪತ್ರಕರ್ತ ಮೊಹಮ್ಮದ್ ಆರೀಫ್ ಪಡುಬಿದ್ರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಹತ್ತು ಮಂದಿ ಅರ್ಹ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನ, ಓರ್ವ ಬಡಮಹಿಳೆಯ ಮನೆ ನಿರ್ಮಾಣಕ್ಕೆ ನೆರವು ಮತ್ತು ಒಬ್ಬರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು. ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 603 ಅಂಕ ಗಳಿಸಿದ ಕೆ.ರಕ್ಷಾ ಅವರನ್ನು ಸಮ್ಮಾನಿಸಲಾಯಿತು. ಚಿತ್ತಾರ ಬಳಗದ ಸಂಚಾಲಕ ಸತೀಶ್ ಸ್ವಾಗತಿಸಿ ಬಳಗದ ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು. ಬಳಗದ ಸದಸ್ಯರಾದ ಚಂದ್ರಶೇಖರ ಪಾತೂರು ಹಾಗೂ ವೆಂಕಟೇಶ್ ಮುಡಿಪು ಕಾರ್ಯಕ್ರಮ ನಿರ್ವಹಿಸಿದರು.