ಕೃಷಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ | 2026–27ನೇ ಸಾಲಿನ ಆತ್ಮ ಯೋಜನೆಯಡಿ ಕಲಾಜಾಥಾ
ಬಂಟ್ವಾಳ: ಕೃಷಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ 2026–27ನೇ ಸಾಲಿನ ಆತ್ಮ ಯೋಜನೆಯಡಿ ರೈತರಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಕಲಾಜಾಥಾ ಕಾರ್ಯಕ್ರಮ ನಡೆಯಿತು.
ಜುಲೈ 17ರಂದು ಆರಂಭಗೊಂಡ ಈ ಕಾರ್ಯಕ್ರಮ ಜುಲೈ 24ರವರೆಗೆ ಕಡಬ, ಪುತ್ತೂರು,ಸುಳ್ಯ, ಬಂಟ್ವಾಳ, ಉಳ್ಳಾಲ, ಮೂಡಬಿದ್ರೆ , ಮುಲ್ಕಿ, ಮಂಗಳೂರು ಹಾಗೂ ಬೆಳ್ತಂಗಡಿ ತಾಲೂಕುಗಳ ವಿವಿಧ ಹೋಬಳಿ ಕೇಂದ್ರಗಳಲ್ಲಿ ನಡೆಯಿತು.
ಕಾರ್ಯಕ್ರಮವು ಓ ಬಂಧು.. ಭಗಿನಿಯರೆ ಇತ್ತ ಕೇಳಿರಿ… ಎಂಬ ಜಾಗೃತಿ ಗೀತೆಯೊಂದಿಗೆ ಆರಂಭಗೊಳ್ಳುತ್ತದೆ. ಬಳಿಕ ಹಾಡು, ಸಂಭಾಷಣೆ ಹಾಗೂ ನಾಟಕದ ಮೂಲಕ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ಸರಳ ಮತ್ತು ಪರಿಣಾಮಕಾರಿ ರೀತಿಯಲ್ಲಿ ತಲುಪಿಸಲಾಗಿದೆ.
ನಾಟಕದಲ್ಲಿ ಬೆಳೆ ಸಮೀಕ್ಷೆಯ ಮಹತ್ವ, ಫಾರ್ಮರ್ ಐಡಿ, ಸೆಂಟ್ರಲ್ ಐಡಿ ನೋಂದಣಿಯ ಅಗತ್ಯ, ಮೊಬೈಲ್ ಸಂಖ್ಯೆ ನವೀಕರಣ, ಎಲ್ಲಾ ಕೃಷಿ ಭೂಮಿಯ ಸರ್ವೆ ನಂಬರುಗಳ ದಾಖಲಾತಿ, ಇ ಕೆವೈಸಿ, ಡಿಜಿಟಲ್ ಕನ್ ಸೆಂಟ್, ಸೇರಿದಂತೆ ಸೆಂಟ್ರಲ್ ಎಫ್.ಐ.ಡಿ. ಪ್ರಕ್ರಿಯೆಯ ಪ್ರಮುಖ ಹಂತಗಳನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಲಾಗುತ್ತದೆ. ಜೊತೆಗೆ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡುವ ವಿಧಾನ ಹಾಗೂ ಅದರ ಪ್ರಯೋಜನಗಳ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲಾಗಿದೆ. ಇದರೊಂದಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕೃಷಿ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ಹಾಗೂ ಪಿಎಂ-ಕಿಸಾನ್ ಯೋಜನೆಗಳ ಕುರಿತು ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡಗಳು ಹಾಗೂ ರೈತರು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ನಾಟಕದ ಮೂಲಕ ಪರಿಚಯಿಸಲಾಯಿತು.
ಈ ಕಲಾಜಾಥಾ ತಂಡದ ನೇತೃತ್ವವನ್ನು ಸಂಸಾರ ಕಲಾತಂಡದ ನಿರ್ದೇಶಕರಾದ ಮೌನೇಶ್ ವಿಶ್ವಕರ್ಮ ವಹಿಸಿಕೊಂಡಿದ್ದರು. ತಂಡದ ಕಲಾವಿದರಾದ ಪೃಥ್ವಿರಾಜ್, ರಮೇಶ್ ಕೆ. ಪುಣಚ, ಭುವನೇಶ್ ಬಿ.ಸಿ.ರೋಡ್, ಆವನಿ ಬೆಳ್ಳಾರೆ, ಮೇಘ ಆಚಾರ್ಯ ಉಪ್ಪಿನಂಗಡಿ, ಲಾವಣ್ಯ, ವಿಶಸ್ ಎಸ್.ಜೆ. ಹಾಗೂ ಪ್ರಜ್ವಲ್ ಪೆರ್ಲ ಅವರು ನಾಟಕದಲ್ಲಿ ಅಭಿನಯಿಸಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಗ್ರಾಮೀಣ ಭಾಗದ ರೈತರಿಗೆ ಇಲಾಖೆಯ ಯೋಜನೆಗಳ ಕುರಿತು ಪರಿಣಾಮಕಾರಿ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ 18 ಸ್ಥಳಗಳಲ್ಲಿ ಸಂಸಾರ ಜೋಡುಮಾರ್ಗ ಕಲಾತಂಡದ ಮೂಲಕ ಈ ಕಲಾಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ.
ಇಲಾಖೆಯ ಮಾಹಿತಿಗಳನ್ನು ಬೀದಿನಾಟಕದ ಮೂಲಕ ನೀಡುವ ಕಾರ್ಯವನ್ನು ನಮ್ಮ ಸಂಸಾರ ಜೋಡುಮಾರ್ಗ ತಂಡ ಜಿಲ್ಲೆಯಾದ್ಯಂತ ‘ರಂಗಹೆಜ್ಜೆ’ಯನ್ನು ದಾಖಲಿಸುವ ಮೂಲಕ ನಡೆಸಿಕೊಟ್ಟಿದೆ. ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ ಎನ್ನುತ್ತಾರೆ ಸಂಸಾರ ಜೋಡುಮಾರ್ಗ ತಂಡದ ನಿರ್ದೇಶಕ ಮೌನೇಶ ವಿಶ್ವಕರ್ಮ.