ಪ್ರತಿಯೊಬ್ಬ ಮನುಷ್ಯನ ಹಿಂದೆ ಒಂದು ಕಥೆ ಇರುತ್ತದೆ. ಜೊತೆಗೆ ಅವರು ಹಾಗೆ ಇರುವುದಕ್ಕೆ ಕಾರಣವೂ ಇರುತ್ತದೆ. ಹಾಗಾಗಿ ಯಾರ ಬಗ್ಗೆಯೂ ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಬಾರದು.
ಮಾಡುವ ಕೆಲಸ ಯಾವುದಾದರೇನು, ಅದು ನಮಗೆ ಒಂದು ತುತ್ತು ಅನ್ನ ಕೊಡುತ್ತಿದ್ದರೆ.. ಅದರ ಮೇಲೆ ಗೌರವವಿರಲಿ.
ಮುಗ್ಧತೆ ಮುಂದೆ ನಿಮ್ಮ ಬುದ್ಧಿವಂತಿಕೆಯ ಪ್ರತಿಭೆ ತೋರಿಸಬೇಡಿ. ಯಾಕಂದ್ರೆ ಆ ಮುಗ್ಧತೆ ಹಿಂದೆ ಭಗವಂತನೇ ನಿಂತಿರ್ತಾನೆ.
ಸಾಮಾನ್ಯ ಇಂಥ ಸಾಲುಗಳು ವಾಟ್ಸಾಪ್ ಗಳ ಸ್ಟೇಟಸ್ ಗಳಲ್ಲಿ ಅಥವಾ ಯಾವುದಾದರೂ ಗೋಡೆಬರೆಹದಲ್ಲಿ, ಕೆಲವೊಮ್ಮೆ ಬಸ್ಸು, ಲಾರಿಗಳ ಹಿಂಬದಿಯಲ್ಲಿ ಇರುವುದನ್ನು ಕಾಣುತ್ತೇವೆ. ಬಿ.ಸಿ.ರೋಡಿನ ಸುಶಾನ್ ಎಂಬವರ ಆಟೊರಿಕ್ಷಾದಲ್ಲಿ ಈ ಸಾಲುಗಳು ನಮ್ಮ ಗಮನ ಸೆಳೆಯುವುದಷ್ಟೇ ಅಲ್ಲ, ಅಲ್ಲಿ ಕುಳಿತ ಪ್ರಯಾಣಿಕನಿಗೆ ಓದಲು ಪುಸ್ತಕಗಳೂ ದೊರಕುತ್ತವೆ.
ಮೂಲತಃ ನೀರಪಾದೆಯವರಾದ ಪ್ರಸ್ತುತ ಬಿ.ಸಿ.ರೋಡಿನ ಅಜ್ಜಿಬೆಟ್ಟು ಮಠ ಎಂಬಲ್ಲಿ ವಾಸ ಮಾಡುತ್ತಿರುವ ಸುಶಾನ್ ಅವರು ವೃತ್ತಿಯಲ್ಲಿ ಗೋಡೆಚಿತ್ರ ಕಲಾವಿದರು. ಹಾಗೆಯೇ ಆಟೊರಿಕ್ಷಾ ಚಾಲನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡವರು. ಜನರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಬೇಕು ಎಂಬ ನಿಟ್ಟಿನಲ್ಲಿ ಅವರು ಪುಸ್ತಕಗಳನ್ನು ತನ್ನ ಆಟೊದಲ್ಲಿ ಜೋಡಿಸಿ ಇಟ್ಟಿದ್ದಾರೆ.
ಒಂದು ಪುಸ್ತಕದ ಅಂಗಡಿಯಲ್ಲಿ ಬಾಗಿಲುಗಳನ್ನೇ ಮಾಡಿಸಿಲ್ಲ. ಕಾರಣ, ಕಳ್ಳರು ಪುಸ್ತಕ ಎಂದಿಗೂ ಓದುವುದಿಲ್ಲ. ಪುಸ್ತಕ ಓದಿದವರು ಕಳ್ಳರಾಗುವುದಿಲ್ಲ. ಈ ಸಾಲುಗಳು ಅವರ ಪುಸ್ತಕಗಳ ಜೋಡಣೆಯ ಬಾಕ್ಸ್ ನಲ್ಲಿ ಕಾಣಸಿಗುತ್ತವೆ.
ಆಟೊರಿಕ್ಷಾದಲ್ಲಿ ಜಾಗ ಸೀಮಿತ. ಅಂಥದ್ದರಲ್ಲಿ ಪುಸ್ತಕ ಜೋಡಿಸಿಡಲು ಜಾಗವೆಲ್ಲಿ ಎಂದು ಕೇಳಿದರೆ, ಸುಶಾನ್ ಅವರ ಬಳಿ ಉತ್ತರವಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಅವರ ಕೈಗೆಟಕುವಂತೆ, ಹಾಗೂ ಅವರಿಗೆ ತೊಂದರೆ ಆಗದಂತೆ ಪುಸ್ತಕಗಳನ್ನು ಜೋಡಿಸಿದ್ದೇನೆ. ಹಾಗೆಯೇ ನಾನು ಕುಳಿತುಕೊಳ್ಳುವ ಜಾಗದ ಎಡಬಲಗಳಲ್ಲಿ ಸಣ್ಣ ಗಿಡ (ಹೂಕುಂಡ)ವನ್ನು ಇಟ್ಟಿದ್ದೇನೆ. ಪರಿಸರಸ್ನೇಹಿಯಾಗಬೇಕು ಎಂಬ ಕಲ್ಪನೆ ಇದರಲ್ಲಡಗಿದೆ ಎನ್ನುತ್ತಾರೆ.
ಪ್ರಯಾಣಿಕರ ಸ್ಪಂದನೆ ಹೇಗಿದೆ
ಪ್ರಯಾಣಿಕರಲ್ಲಿ ಕೆಲವರು ಇದೇನು ಎಂದು ಕುತೂಹಲ ವ್ಯಕ್ತಪಡಿಸಿ ಕೇಳುವುದುಂಟು. ಕೆಲವರು ಮನೆಗೆ ಪುಸ್ತಕವನ್ನು ಒಯ್ದು ಮರಳಿಸಿ ಕೊಟ್ಟಿದ್ದಾರೆ. ಬಿಡುವಿನ ವೇಳೆ ಸಹ ಆಟೊ ಚಾಲಕರು, ಸಾರ್ವಜನಿಕರು ಪುಸ್ತಕ ಓದಿದ್ದಾರೆ. ಹೀಗೆ ಆಟೊದಲ್ಲಿ ಪುಸ್ತಕಗಳನ್ನು ಇಟ್ಟದ್ದು ಓದುವ ಹವ್ಯಾಸ ಬೆಳೆಸಬೇಕು ಎಂಬ ನನ್ನ ಆಶಯಕ್ಕೆ ಪೂರಕವಾದ ಸ್ಪಂದನೆ ದೊರಕಿದೆ ಜನರಿಗೆ ಏನಾದರೂ ಸಂದೇಶವನ್ನು ಕೊಡಬೇಕು ಎಂಬ ಕನಸಿತ್ತು. ನನ್ನ ಅನುಭವಕ್ಕೆ ಬಂದ ಸಾಲುಗಳನ್ನು ಹಾಕಿದ್ದೇನೆ. ಎದುರು ಕುಳಿತುಕೊಳ್ಳುವ ಬದಿಯಲ್ಲಿ ಗಿಡಗಳನ್ನು ಇಟ್ಟಿದ್ದೇನೆ. ಆಟೊ ಪ್ರಯಾಣಿಕರಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಲು ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದೇನೆ ಎಂದು ಸುಶಾನ್ ಹೇಳಿದರು.https://www.bantwalnews.com