ಪ್ರಮುಖ ಸುದ್ದಿಗಳು

ಕಾಲನ್ನೇ ಕೈಯನ್ನಾಗಿಸಿದ ಛಲಗಾರ: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಬಂಟ್ವಾಳದ ಕೌಶಿಕ್ ಆಚಾರ್ಯ

ಕೈಯಲ್ಲಿ ಬರೆಯಲು ಆಗುವುದಿಲ್ಲ, ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ ಎಂದಾಗ ಮಾನಸಿಕವಾಗಿ ಕುಸಿದುಹೋಗುವವರು ಇದ್ದಾರೆ. ಆದರೆ ಬಂಟ್ವಾಳದ ಕೌಶಿಕ್ ಆಚಾರ್ಯ ಅದನ್ನು ಸವಾಲಾಗಿ ತೆಗೆದುಕೊಂಡರು. ಕಾಲನ್ನೇ ಕೈಯನ್ನಾಗಿ ಮಾಡಿಕೊಂಡು ಚಿತ್ರಕಲೆಯ ಲೋಕದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಇದೀಗ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಕೇವಲ 3 ನಿಮಿಷ 40 ಸೆಕೆಂಡ್​​ಗಳಲ್ಲೇ ಕಾಲಿನಿಂದ ಬಿಡಿಸಿ, ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಬಂಟ್ವಾಳ ಕಂಚಿಕಾರಪೇಟೆಯ ನಿವಾಸಿ ಕೌಶಿಕ್ ಆಚಾರ್ಯ, ರಾಜೇಶ್ ಆಚಾರ್ಯ ಹಾಗೂ ಜಲಜಾಕ್ಷಿ ದಂಪತಿಯ ಪುತ್ರ. ಹುಟ್ಟುವಾಗಲೇ ಮಗುವಿಗೆ ಎರಡೂ ಕೈಗಳಿಲ್ಲ ಎಂಬ ವಿಚಾರ ತಿಳಿದಾಗ ಕುಟುಂಬಕ್ಕೆ ಆಘಾತವಾಗಿತ್ತು. ಆದರೆ, ಮಗನ ಭವಿಷ್ಯವನ್ನು ಕೊರಗಿನಲ್ಲಿ ಕಳೆಯುವುದಕ್ಕಿಂತ ಧೈರ್ಯದಿಂದ ಬೆಳೆಸಬೇಕು ಎಂದು ನಿರ್ಧರಿಸಿದ ಪೋಷಕರು, ಆತನಲ್ಲಿ ಆತ್ಮವಿಶ್ವಾಸ ತುಂಬಿದರು. ವಿಶೇಷವಾಗಿ ತಾಯಿ ಜಲಜಾಕ್ಷಿ, ಶಾಲೆಗೆ ಹೋಗುವ ಮುನ್ನವೇ ಕಾಲಿನ ಹೆಬ್ಬೆರಳುಗಳ ನಡುವೆ ಪೆನ್ಸಿಲ್ ಹಿಡಿಸಿ ಅಕ್ಷರ ಬರೆಯುವುದನ್ನು ಕಲಿಸಿದರು. ಇದೇ ಮುಂದೆ ಆತನ ಬದುಕಿನ ದಿಕ್ಕನ್ನೇ ಬದಲಿಸಿತು.

ಶಿಕ್ಷಣ ಸಚಿವರ ಗಮನ ಸೆಳೆದಿದ್ದ ಬಾಲಕ

ಜಾಹೀರಾತು

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕಾಲಿನ ಬೆರಳಲ್ಲಿ ಪರೀಕ್ಷೆ ಬರೆದ ಫೊಟೋ ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಮನ ಸೆಳೆದಿತ್ತು. ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಹೇಳಿ ಆತನಿಗೆ ಭೇಷ್ ಎಂದಿದ್ದರು. ಮುಂದೆ ಬಂಟ್ವಾಳಕ್ಕೆ ಬಂದ ಸಂದರ್ಭ ಕೌಶಿಕ್ ನನ್ನು ಭೇಟಿಯಾಗಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು.

VNR GOLD

ಚಿತ್ರಕಲೆಯತ್ತ ಆಸಕ್ತಿ:

ಚಿತ್ರಕಲೆಯತ್ತ  ಕೌಶಿಕ್‌ಗೆ ಬಾಲ್ಯದಿಂದಲೇ ವಿಶೇಷ ಆಸಕ್ತಿ. ಮನೆಯಲ್ಲೇ ಸಂಬಂಧಿಕರು ಹಾಗೂ ಅಣ್ಣ ಚಿತ್ರ ಬಿಡಿಸುವುದನ್ನು ಗಮನಿಸುತ್ತಾ, ಯಾವುದೇ ತರಬೇತಿ ಪಡೆಯದೇ ಸ್ವತಃ ಅಭ್ಯಾಸ ಆರಂಭಿಸಿದರು. ಚಾರ್‌ಕೋಲ್ ಆರ್ಟ್, ಪೆನ್ಸಿಲ್ ಸ್ಕೆಚ್, ಕ್ಲೇ ಮಾಡೆಲಿಂಗ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಕೇವಲ ಗಮನಿಸುವುದರ ಮೂಲಕವೇ ಕಲಿತುಕೊಂಡರು. ರಜಾ ದಿನಗಳಲ್ಲಿ ಸಮಯ ವ್ಯರ್ಥ ಮಾಡದೇ ನಿರಂತರ ಅಭ್ಯಾಸ ನಡೆಸಿದರು. ಇದು ಅವರ ಪ್ರತಿಭೆಯನ್ನು ಮತ್ತಷ್ಟು ಅರಳುವಂತೆ ಮಾಡಿತು.ಇದೇ ವೇಳೆ, ಅವರ ಚಿತ್ರಗಳನ್ನು ಕಂಡ ಹಲವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪ್ರಯತ್ನಿಸುವಂತೆ ಸಲಹೆ ನೀಡಿದರು.

ಆ ಸಲಹೆಯನ್ನೇ ಸವಾಲಾಗಿ ಸ್ವೀಕರಿಸಿದ ಕೌಶಿಕ್, ವಿಭಿನ್ನ ಸಾಧನೆ ಮಾಡಲು ನಿರ್ಧರಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಅರಿಶಿಣದ ಪುಡಿ ಹಾಗೂ ಅಂಟಿನ ಸಹಾಯದಿಂದ ಕಾಲಿನ ಮೂಲಕ ಅತ್ಯಂತ ವೇಗವಾಗಿ ಬಿಡಿಸುವ ಅಭ್ಯಾಸ ಆರಂಭಿಸಿದರು. ಎರಡು ಪ್ರಯತ್ನಗಳು ವಿಫಲವಾದರೂ ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡ ಅವರು, ಕೇವಲ 3 ನಿಮಿಷ 40 ಸೆಕೆಂಡ್​​ಗಳ ಅವಧಿಯಲ್ಲಿ ಚಿತ್ರ ಪೂರ್ಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿದರು. ಈ ಸಾಧನೆಗೆ ಆಳ್ವಾಸ್ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಕುಟುಂಬದ ಸದಸ್ಯರು ನೀಡಿದ ಬೆಂಬಲವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಮೆಚ್ಚುಗೆ ಪಡೆದ ಚಿತ್ರಗಳು:

ಸದ್ಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಎಂಎಸ್‌ಡಬ್ಲ್ಯು (ಪ್ರಥಮ ವರ್ಷ) ವ್ಯಾಸಂಗ ಮಾಡುತ್ತಿರುವ ಕೌಶಿಕ್, ಶಿಕ್ಷಣದ ಜೊತೆಗೆ ಚಿತ್ರಕಲೆಯನ್ನು ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಹೊಂದಿದ್ದಾರೆ. ಪೆನ್ಸಿಲ್ ಸ್ಕೆಚ್‌ಗಳು, ಚಾರ್‌ಕೋಲ್ ಆರ್ಟ್‌ಗಳು ಹಾಗೂ ಶ್ರೀಕೃಷ್ಣನ ಭಾವಚಿತ್ರ ಸೇರಿದಂತೆ ಅನೇಕ ಕಲಾಕೃತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಮೆಚ್ಚುಗೆ ಪಡೆದಿವೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಚಿಂತನೆ: ಸಚಿವ ಖಾದರ್

| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)

2 days ago