ಬಂಟ್ವಾಳ: ಇಂದು ಬಜಪೆ ಕೈಕಂಬ ನಿವಾಸಿ ಅಭಿಜಿತ್ ಅವರು ಮಂಗಳೂರಿನಲ್ಲಿ ಉದ್ಯೋಗ ಆರಂಭಿಸಲಿದ್ದರು. ಆದರೆ ಸ್ನೇಹಿತನನ್ನು ಬಿಟ್ಟುಬರಲು ಬಂಟ್ವಾಳದ ಅಮ್ಟಾಡಿ ಎಂಬಲ್ಲಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದು ಡಿಕ್ಕಿಯಾಗಿ ಫರಂಗಿಪೇಟೆ ಸಮೀಪ ಕಡೆಗೋಳಿ ಎಂಬಲ್ಲಿ ಇಹಲೋಕ ತ್ಯಜಿಸಿದ್ದಾರೆ. ಉದ್ಯೋಗಕ್ಕೆ ಸೇರಿ ಬದುಕು ಕಟ್ಟಬೇಕಾದ ಯುವಕ ಅಪಘಾತಕ್ಕೆ ಬಲಿಯಾಗಿದ್ದಾರೆ.
ಬಜಪೆ ಕೈಕಂಬ ನಿವಾಸಿ ಅಭಿಜಿತ್ ( 28) ಮೃತಪಟ್ಟರೆ ಸಹಸವಾರ ಸಂದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಭಿಜಿತ್ ಅವರು ಸ್ನೇಹಿತ ಸಂದೀಪ್ ಅವರನ್ನು ಬೈಕಿನಲ್ಲಿ ಬಂಟ್ವಾಳ ಅಮ್ಟಾಡಿ ಮನೆಗೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ, ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಫರಂಗಿಪೇಟೆ ಸಮೀಪದ ಕಡೆಗೋಳಿ ಎಂಬಲ್ಲಿ ಅಪರಿಚಿತ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಪಲ್ಟಿಯಾಗಿದ್ದು ಅಭಿಜಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಹಿಂಬದಿ ಸವಾರ ಸಂದೀಪ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.