ಬಂಟ್ವಾಳ

ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೊಳಪು: ₹26.18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ಏನೇನಾಗಿದೆ ಇಲ್ಲಿ?

2024ರಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣ ಸಹಿತ ದೇಶದ ಹಲವು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಪ್ರಕ್ರಿಯೆ ಮೂಲಕ ನೆರವೇರಿಸಿದ್ದರು. ಅದೀಗ ಪೂರ್ಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಅಮೃತ ಭಾರತ ಸ್ಟೇಶನ್ ಸ್ಕೀಮ್ ನ (ಎಪಿಎಸ್ ಎಸ್ ) ಎರಡನೇ ಹಂತದಲ್ಲಿ ನವೀಕರಣಗೊಂಡ ನೈಋತ್ಯ ರೈಲ್ವೆ ವಲಯದ ನಾಲ್ಕು ರೈಲ್ವೆ ನಿಲ್ದಾಣಗಳು ಅಭಿವೃದ್ಧಿಗೊಂಡರೆ, ದೇಶದಾದ್ಯಂತ ಒಟ್ಟು 75 ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿವೆ. ಇವೆಲ್ಲವೂ ಜುಲೈ 17ರಂದು ವರ್ಚುವಲ್ ಪ್ರಕ್ರಿಯೆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಕೊಪ್ಪಳ, ಬಾದಾಮಿ ಹಾಗೂ ಅಳ್ನಾವರ, ಮೈಸೂರು ವಿಭಾಗದ ಬಂಟ್ವಾಳ ರೈಲ್ವೆ ನಿಲ್ದಾಣ ಇದರಲ್ಲಿ ಸೇರಿವೆ. ಅಳ್ನಾವರ 17.2 ಕೋಟಿ ರೂ, ಬಾದಾಮಿ 15.1 ಕೋಟಿ ರೂ, ಕೊಪ್ಪಳ 21.14 ಕೋಟಿ ರೂ, ಬಂಟ್ವಾಳ 26.18 ಕೋಟಿ ರೂ ವೆಚ್ಚದಲ್ಲಿ ಮರುನಿರ್ಮಾಣವಾಗಿವೆ.

ಜಾಹೀರಾತು

ಬಂಟ್ವಾಳದಲ್ಲಿ ಏನಾಗಿದೆ?

ಬಂಟ್ವಾಳ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಕಾಮಗಾರಿಯನ್ನು ₹26.18 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ವಹಿಸಲಾಗಿದೆ. ಇಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಇವು.

ಪ್ರವೇಶದ್ವಾರದಲ್ಲಿ ಕರಾವಳಿಯ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ.

ಪ್ರಯಾಣಿಕರ ನಿರೀಕ್ಷಣಾ ಮಂದಿರಗಳು ಮತ್ತು ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳ ಸುಧಾರಣೆಗೊಂಡಿವೆ.

ಪ್ರಯಾಣಿಕರಿಗೆ ಕುಳಿತುಕೊಳ್ಳಲು ಉತ್ತಮ ವ್ಯವಸ್ಥೆ ಮತ್ತು ಹೆಚ್ಚುವರಿ ಅನುಕೂಲತೆಗಳನ್ನು ಒದಗಿಸಲಾಗಿದೆ.

ಡ್ರಾಪ್-ಆಫ್ ಮತ್ತು ಪಿಕ್-ಅಪ್ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ವಾಹನಗಳ ಸುರಕ್ಷಿತ ಪೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸುರಕ್ಷತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇಡೀ ಸ್ಟೇಶನ್ ಅನ್ನು ಸಿಸಿ ಕ್ಯಾಮರಾದಡಿ ನಿಗಾ ವಹಿಸಲಾಗಿದೆ.

ಪ್ಲಾಟ್‌ಫಾರ್ಮ್ ಮೂಲಸೌಕರ್ಯವನ್ನು ಬಲಪಡಿಸಲು ಪೂರ್ಣ ಉದ್ದದ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳನ್ನು ಒದಗಿಸಲಾಗಿದೆ, ಇದರಿಂದ ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಪ್ರಯಾಣಿಕರಿಗೆ ರಕ್ಷಣೆ ಸಿಗುತ್ತದೆ.

ನಿಲ್ದಾಣ ಕಟ್ಟಡದ ಮುಂಭಾಗದಲ್ಲಿನ ಪ್ಲಾಟ್‌ಫಾರ್ಮ್ ಮೇಲ್ಮೈ ಸುಧಾರಣೆ ಮಾಡಲಾಗಿದ್ದು, ಸುಲಭ ಸಂಚಾರಕ್ಕೆ ಅನುಕೂಲವಾಗಿದೆ.

ನಿಲ್ದಾಣದ ಒಳಾಂಗಣ ಸುಧಾರಣೆಯಲ್ಲಿ ಆಧುನಿಕ ಫರ್ನಿಚರ್, ಬೆಳಕು ವ್ಯವಸ್ಥೆ ಮತ್ತು ಲ್ಯಾಂಡ್‌ಸ್ಕೇಪಿಂಗ್ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಪ್ರವೇಶ/ನಿರ್ಗಮನ ಕಮಾನುಗಳನ್ನು ನಿರ್ಮಿಸುವ ಮೂಲಕ ನಿಲ್ದಾಣದ ವಾಸ್ತುಶೈಲಿಯನ್ನು ಸುಧಾರಿಸಲಾಗಿದ್ದು, ವಿಶಿಷ್ಟ ರೂಪ ನೀಡಲಾಗಿದೆ.

ಉನ್ನತ ಮಟ್ಟದ ಬೆಳಕು ವ್ಯವಸ್ಥೆ, ಎಲ್.ಇ.ಡಿ. ಪ್ಲಾಟ್‌ಫಾರ್ಮ್ ಹೆಸರು ಫಲಕಗಳು, ಎಲ್.ಇ.ಡಿ. ಸೈನ್‌ಬೋರ್ಡ್‌ಗಳು ಮತ್ತು ಫಸಾಡ್ ಲೈಟಿಂಗ್ ಅಳವಡಿಸಲಾಗಿದೆ, ಇದರಿಂದ ದೃಶ್ಯತೆ ಹೆಚ್ಚುವುದರ ಜೊತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಿದೆ.

ಪ್ರಯಾಣಿಕರ ಮಾಹಿತಿಗಾಗಿ ಕೋಚ್ ಇಂಡಿಕೇಷನ್ ಬೋರ್ಡ್‌ಗಳು, ರೈಲು ಇಂಡಿಕೇಷನ್ ಬೋರ್ಡ್‌ಗಳು, ಸಾರ್ವಜನಿಕ ಘೋಷಣೆ ವ್ಯವಸ್ಥೆ ಪಿಎ ಸಿಸ್ಟಮ್, ಮತ್ತು ಗಡಿಯಾರಗಳು ಒದಗಿಸಲಾಗಿದೆ.

ಎರಡನೇ ಪ್ಲಾಟ್ ಫಾರ್ಮ್ ನಿಂದ ಒಂದನೇ ಪ್ಲಾಟ್ ಫಾರ್ಮ್ ಸಂಪರ್ಕಿಸಲು ಫೂಟ್ ಓವರ್ ಬ್ರಿಡ್ಜ್ ಮತ್ತು ಮೆಟ್ಟಿಲು ಹತ್ತಲು ಸಾಧ್ಯವಾಗದವರಿಗೆ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪುರುಷರು ಮತ್ತು ಮಹಿಳೆಯರಿಗಲ್ಲದೆ, ವಿಶಿಷ್ಟ ಚೇತನರಿಗೆಂದು ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ.

ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ.

VNR GOLD

ಏನಾಗಬೇಕಿದೆ?

  1. ಬಂಟ್ವಾಳ ರೈಲ್ವೆ ಪ್ರಯಾಣಿಕಸ್ನೇಹಿಯಾಗಲು ಇಲ್ಲಿ ರಾಜಕೀಯ ರಹಿತವಾಗಿ ನಾಗರಿಕರ ರಕ್ಷಾ ಸಮಿತಿಯನ್ನು ಪುನರ್ ಸಂಘಟಿಸಬೇಕಿದೆ.

2. ಎರಡನೇ ಪ್ಲಾಟ್ ಫಾರ್ಮ್ ಗೆ ರೈಲುಗಳ ಆಗಮನ ಹೆಚ್ಚಿಸಬೇಕು.

3. ಎರಡನೇ ಪ್ಲಾಟ್ ಫಾರ್ಮ್ ಮೂಲಕ  ಬಿ.ಸಿ.ರೋಡ್ ಪೇಟೆ ತಲುಪಲು ಹಾಗೂ ಬಸ್ಸು ನಿಲ್ದಾಣ ತಲುಪಲು ನಡೆದುಕೊಂಡು ಹೋಗುವಷ್ಟು ಹತ್ತಿರವಿದ್ದು, ಈ ಭಾಗ (ಕೈಕುಂಜ)ದ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಹಾಗೂ ರೈಲು ಇಳಿದು ಹೋಗುವ ಪ್ರಯಾಣಿಕರು ಗೊಂದಲಕ್ಕೆ ಒಳಗಾಗದಂತೆ ಅವರಿಗೆ ಸೂಕ್ತ ಮಾರ್ಗದರ್ಶನ ವ್ಯವಸ್ಥೆ ಕಲ್ಪಿಸಬೇಕು

4. ರೈಲ್ವೆ ನಿಲ್ದಾಣದ ಮಾಹಿತಿಗಳನ್ನು ತಿಳಿಯಲು ಆಪ್ ಗಳು ಇದ್ದರೂ ನಿಲ್ದಾಣದ ದೂರವಾಣಿ ಸಂಖ್ಯೆ ಸಾರ್ವಜನಿಕರಿಗೆ ದೊರಕುವಂತಿರಬೇಕು.

5. ರೈಲ್ವೆ ನಿಲ್ದಾಣದಲ್ಲಿ ನಮೂದಿಸಲಾದ ವೈದ್ಯರು ತುರ್ತು ಸೇವೆಗೆ ಲಭ್ಯರಾಗುವಂತಿರಬೇಕು. ಕೆಲವೊಮ್ಮೆ ವೈದ್ಯರೇ ಇಲ್ಲದಿದ್ದರೆ ಸಮಸ್ಯೆ ಉದ್ಭವವಾಗಬಹುದು.

ಬಂಟ್ವಾಳ ರೈಲು ನಿಲ್ದಾಣದ ಪುನರ್ ಅಭಿವೃದ್ಧಿ ಯೋಜನೆವು ಪ್ರಯಾಣಿಕರ ಆರಾಮ, ಸಂಚಾರ ವ್ಯವಸ್ಥೆಯ ಸುಧಾರಣೆ ಮತ್ತು ಮೂಲಸೌಕರ್ಯ ನವೀಕರಣದ ಮೇಲೆ ಕೇಂದ್ರೀಕರಿಸಿ, ನಿಲ್ದಾಣವನ್ನು ಆಧುನಿಕ, ಪರಿಣಾಮಕಾರಿ ಮತ್ತು ಪ್ರಯಾಣಿಕ ಸ್ನೇಹಿ ಕೇಂದ್ರವಾಗಿ ಪರಿವರ್ತಿಸುತ್ತದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ  ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ. ಹಿರಿಯ ಪ್ರಚಾರ ನಿರೀಕ್ಷಕ ಎಚ್.ಶಿವಕುಮಾರ್ ಮತ್ತು ಮನು ಎಚ್.ಆರ್. ಜತೆಗಿದ್ದರು.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.