
ಸೂರಿಕುಮೇರಿ ಗೋವಿಂದ ಭಟ್ಟರು ನಿರಂತರ ಎಪ್ಪತ್ತು ವರ್ಷಗಳ ತಿರುಗಾಟದ ಮೂಲಕ ದಾಖಲೆ ನಿರ್ಮಿಸಿದ ಸವ್ಯಸಾಚಿ ಕಲಾವಿದರು. ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸೋಮವಾರ ನಡೆದ ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ ಕಲಾವಿದರು, ಗೋವಿಂದ ಭಟ್ಟರ ಒಡನಾಡಿಗಳು ಹಾಗೂ ಅಭಿಮಾನಿಗಳು ಬಣ್ಣಿಸಿದರು.
ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ಯಕ್ಷಗಾನ ದಶಾವತಾರಿ ಡಾ.ಕೆ.ಗೋವಿಂದ ಭಟ್ ಅವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಗುಣಗಾನ ಮಾಡಿದ ಅಭಿಮಾನಿಗಳು ಕಲಾವಿದ ಶ್ರೇಷ್ಠರಾದರೂ ಎಲ್ಲರೊಡನೆ ಬೆರೆಯುತ್ತಿದ್ದ ಅವರ ಗುಣವನ್ನು ಸ್ಮರಿಸಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಕಷ್ಟಗಳಿದ್ದರು ತೋರಿಸಿಕೊಳ್ಳದೆ ವೇಷ ಮಾಡಿದವರು ಅವರು ಎಂದರು.
ಹಿರಿಯ ವಿಮರ್ಶಕ, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ, ನಿರಂತರ ಎಪ್ಪತ್ತೊಂದು ವರ್ಷಗಳ ತಿರುಗಾಟ ಮಾಡಿ ದಾಖಲೆ ಮೆರೆದವರು. ವೇಷ ವೈವಿಧ್ಯಗಳಲ್ಲಿ, ವಹಿಸಿದ ಪಾತ್ರಗಳಲ್ಲಿ ಯಕ್ಷಗಾನದ ಮೊದಲ ಹೆಜ್ಜೆಯಿಂದ ಕೊನೆಯ ಹೆಜ್ಜೆಯವರೆಗೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು. ತೆಂಕು ತಿಟ್ಟಿನ ಯಕ್ಷಗಾನ ಪರಿಪೂರ್ಣ ರೂಪ ಎಂದು ಕುಂಬಳೆ ಸುಂದರ ರಾಯರೇ ಹೇಳಿದ್ದಾರೆ. ಅವರ ಕುರಿತು ಸಂಶೋಧನಾತ್ಮಕ ಅಧ್ಯಯನ ಆಗಬೇಕು ಎಂದರು.
ಹಿರಿಯ ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ಗೋವಿಂದ ಭಟ್ಟರು ಮಾರ್ಗದರ್ಶಿಯಾಗಿದ್ದರು ಎಂದು ಒಡನಾಟ ಸ್ಮರಿಸಿದರು.
ಹಾದಿಗಲ್ಲು ಲಕ್ಷ್ಮೀನಾರಾಯಣ ರಾವ್ ಮಾತನಾಡಿ ಯಕ್ಷಗಾನ ಪೂರ್ಣಾವತಾರಿ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಕಲಾವಿದ ಎಷ್ಟೇ ಪಾಂಡಿತ್ಯವುಳ್ಳವನಾದರೂ ಎದುರಿದ್ದ ಪ್ರೇಕ್ಷಕ ಒಪ್ಪಿದಾಗ ಮಾತ್ರ ಪರಿಪೂರ್ಣ. ಗೋವಿಂದ ಭಟ್ಟರು ಅಂಥ ಪರಿಪೂರ್ಣ ಕಲಾವಿದರು ಎಂದರು.
ಪ್ರಮುಖರಾದ ಜಿ.ಕೆ.ಭಟ್ ಸೇರಾಜೆ, ಪಂಜ ಭಾಸ್ಕರ ಭಟ್, ಜಬ್ಬಾರ್ ಸಮೋ, ಆರ್.ಕೆ.ಭಟ್, ಸಂಜಯ ಕುಮಾರ್, ಶರವು ರಾಘವೇಂದ್ರ ಶಾಸ್ತ್ರಿ, ರಾಧಾಕೃಷ್ಣ ಕಲ್ಚಾರ್, ಧರ್ಮಸ್ಥಳದ ಬಿ.ಭುಜಬಲಿ, ಪ್ರೊ. ಎಂ.ಎಲ್.ಸಾಮಗ,, ಭಾಸ್ಕರ ರೈ ಕುಕ್ಕುವಳ್ಳಿ, ಪುತ್ತಿಗೆ ರಘುರಾಮ ಹೊಳ್ಳ, ಬೇಗಾರು ಶಿವಕುಮಾರ್, ವಸಂತ ಗೌಡ ಕಾಯರ್ತಡ್ಕ, ಸರಪಾಡಿ ಅಶೋಕ ಶೆಟ್ಟಿ, ದಿವಾಣ ಗೋವಿಂದ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಿದ್ಯಾ ಕೋಳ್ಯುರು, ಮುರಳಿ ಕಡೆಕಾರ್, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನಿವೃತ್ತ ಶಿಕ್ಷಕಿ ಶಾರದಾ ಟೀಚರ್, ಗಿರೀಶ್ ರೈ ಕಕ್ಯಪದವು, ವಾಸುದೇವ ರಂಗ ಭಟ್ಟ, ಪ್ರಶಾಂತ್ ಹೊಳ್ಳ, ಶಾಂತಾರಾಮ ಕುಡ್ವ ಮಾತನಾಡಿದರು. ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಪ್ರಮುಖರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶ್ರೀಪತಿ ಭಟ್, ಮಾವೆ ದಿನಕರ ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್, ಟಿ.ಜಿ.ರಾಜಾರಾಮ ಭಟ್, ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಶ್ಯಾಮ ಭಟ್ ಸಹಿತ ಗೋವಿಂದ ಭಟ್ಟರ ಅಭಿಮಾನಿಗಳು, ವಿವಿಧ ಮೇಳಗಳ ಕಲಾವಿದರು, ಶಿಷ್ಯರು, ಬಂಧುಗಳು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


Be the first to comment on "ನಿರಂತರ ಎಪ್ಪತ್ತು ವರ್ಷಗಳ ತಿರುಗಾಟದ ದಾಖಲೆ ಮಾಡಿದ ಸವ್ಯಸಾಚಿ | ಬಂಟ್ವಾಳದಲ್ಲಿ ದಶಾವತಾರಿ ಗೋವಿಂದ ಭಟ್ ಸ್ಮರಣೆ"