
ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ 37ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮ ಏ.10ರಂದು ಶುಕ್ರವಾರ ನಡೆಯಿತು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಏಳನೇ ತರಗತಿಯಿಂದ ತೇರ್ಗಡೆಯಾಗಿ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ವತಿಯಿಂದ 37ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಭೂದಾಖಲೆಗಳ ಉಪನಿರ್ದೇಶಕರಾದ ಪುಷ್ಪರಾಜ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳೆಯಲು ಶಿಕ್ಷಣ ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಅಧ್ಯಕ್ಷ ಆನಂದ ಕುಮಾರ್ ಕೆ, ತಾಲೂಕು ಅಧ್ಯಕ್ಷ ರಾಘವೇಂದ್ರ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಂಪ್ಯೂಟರ್ ತರಬೇತಿ ಶಿಕ್ಷಕ ಶಿವಮೂರ್ತಿ ಅವರ ವತಿಯಿಂದ ಕಂಪ್ಯೂಟರ್ ಕಲಿಕಾ ಮಾಹಿತಿ ಪುಸ್ತಕವನ್ನು ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಎಸ್.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ, ಭೂಮಾಪನಾ ನೌಕರರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಸಂಘದ ಸರ್ವಸದಸ್ಯರು ಶಾಲೆಯ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆಗಳನ್ನು ಉಲ್ಲೇಖಿಸಿ, ವಿದ್ಯಾರ್ಥಿಗಳ ಉಚಿತ ಕಂಪ್ಯೂಟರ್ ಶಿಕ್ಷಣಕ್ಕೆ ಕಳೆದ ಮೂರು ವರ್ಷಗಳಿಂದ ನೆರವಾಗುತ್ತಿರುವುದನ್ನು ಸ್ಮರಿಸಿದರು. ಮುಖ್ಯ ಶಿಕ್ಷಕಿ ಲಕ್ಷ್ಮೀ, ಶಾಲೆಯ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿವಮೂರ್ತಿ ಆರ್. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.


Be the first to comment on "ಸಮುದಾಯದತ್ತ ಶಾಲೆ, ಪ್ರತಿಭಾ ಪುರಸ್ಕಾರ, 37ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ"