+++++++++++++++++++++++++++
ಪದ್ಯಾಣದ ಮಣ್ಣಿನಲ್ಲಿ ಸಂಸ್ಕೃತಿ ಇದೆ: ಗುರ್ಮೆ ಸುರೇಶ್ ಶೆಟ್ಟಿ

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಟೆ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಸುಧರ್ಮ ಸಭೆ ಬುಧವಾರ ಸಂಜೆ ಕ್ಷೇತ್ರದಲ್ಲಿ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿ, ಈ ಮಣ್ಣಿನ ಗುಣದಲ್ಲಿ ಸಂಸ್ಕೃತಿ ಇದೆ. ಇದನ್ನು ಉಳಿಸಿಕೊಂಡು ಹೋಗಬೇಕು. ನಮ್ಮ ದೇವಸ್ಥಾನಗಳು ನಮ್ಮ ಪೂರ್ವಜರು ಬಿಟ್ಟುಹೋದ ಆಸ್ತಿ ಎಂದರು.

ಧಾರ್ಮಿಕ ಉಪನ್ಯಾಸವನ್ನು ವೇ.ಮೂ.ಕಶೆಕೋಡಿ ಸೂರ್ಯನಾರಾಯಣ ಭಟ್ ನೀಡಿದರು.ನಮ್ಮ ಊರಲ್ಲಿರುವ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಎಲ್ಲರೂ ಬರಬೇಕಾಗಿರುವುದು ಸಮಾಜದ ಜವಾಬ್ದಾರಿ . ಸಮಾಜ ಹಾಳಾಗುತ್ತಿದೆ, ಅದಕ್ಕೆ ಸಂಸ್ಕಾರ ನೀಡಲು ದೇವಸ್ಥಾನ ಅಗತ್ಯ. ವ್ಯಕ್ತಿನಿರ್ಮಾಣದ ಮೂಲಕ ರಾಷ್ಟನಿರ್ಮಾಣದ ಕನಸು ದೇವಸ್ಥಾನಗಳಿಂದ ಆರಂಭವಾಗುತ್ತದೆ. ನಮ್ಮಲ್ಲಿ ಒಳ್ಳೆತನವನ್ನು ಜಾಗೃತಮಾಡಲು ದೇವತಾರ್ಚನೆಯಿಂದ ಸಾಧ್ಯ. ಎಲ್ಲವೂ ಪರಶಿವನೇ ಆಗಿದ್ದಾನೆ. ಜ್ಞಾನ, ಭಕ್ತಿ, ವೈರಾಗ್ಯವನ್ನು ದೇವರಲ್ಲಿ ಬೇಡಬೇಕು ಎಂದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಗೋಸಂಪತ್ತನ್ನು ಉಳಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು. ಮಹಾಲಿಂಗೇಶ್ವರನ ಸಂಪೂರ್ಣ ದಯೆ ಎಲ್ಲರಿಗೂ ಇದೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನಮ್ಮೊಳಗಿರುವ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಲು ಬ್ರಹ್ಮಕಲಶೋತ್ಸವ ಪೂರಕ ಎಂದರು.

ಹರಿಹರಪುರ ಪ್ರಬೋಧಿನಿ ಗುರುಕುಲದ ವ್ಯವಸ್ಥಾಪಕ ಉಮೇಶ್, ಕೆಎಂಎಫ್ ಮಂಗಳೂರು ನಿರ್ದೇಶಕರಾದ ನಂದರಾಮ ರೈ, ಸ್ಕ್ವ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಬನಾರಿ ಗೋಪಾಲಕೃಷ್ಣ ದೇವಸ್ಥಾನ ಕಾರ್ಯಾಧ್ಯಕ್ಷ ರವೀಂದ್ರನಾಥ ಪಿ.ಎಸ್, ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಜಿ.ಕೆ.ಭಟ್ ಸೇರಾಜೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ವಹಿಸಿದ್ದರು. ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ವಂದಿಸಿದರು. ಹೇಮಾ ಜಯರಾಮ ರೈ ಮತ್ತು ನವ್ಯಾ ಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು


Be the first to comment on "ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವುದು ಸಮಾಜದ ಜವಾಬ್ದಾರಿ: ಕಶೆಕೋಡಿ ಸೂರ್ಯನಾರಾಯಣ ಭಟ್"