
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಮಾತೃಸಂಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನನ ಶ್ರೀ ಮಾತಾನಂದಮಯೀ ಮಾತನಾಡಿ, ಸಮಾಜ ಧೀಶಕ್ತಿಯಿಂದ ಮುಂದುವರಿಯಬೇಕು. ತಾಯಿ ಮಗುವಿನ ಸಂಬAಧ ಕ್ಷೀಣವಾಗುತ್ತಿರುವ ಹೊತ್ತಿನಲ್ಲಿ ತಳಪಾಯ ಗಟ್ಟಿ ಇರುವಂಥ ಸಂಬAಧ ಸೃಷ್ಟಿಯಾಗಬೇಕು. ತಾಯಿಬೇರು ಗಟ್ಟಿ ಇರಬೇಕು ಎಂದರು. ಪದ್ಯಾಣ ಮನೆತನವೆಂದರೆ ಜೇನುತುಪ್ಪ ಇದ್ದಂತೆ. ಜನರ ಅಂತಃಕರಣವನ್ನು ಗೆಲ್ಲುವುದು ಬಾಂಧವ್ಯದ ಸಂದೇಶ. ಭಾರತೀಯ ಸಂಸ್ಕೃತಿಯಲ್ಲಿ ಮಾತೆಗೆ ಮೊದಲ ಸ್ಥಾನ ನೀಡಲಾಗಿದೆ. ಜಗನ್ಮಾತೆಗೆ ಮಾತೆಯ ಸ್ಥಾನ ನೀಡಲಾಗಿದೆ. ದೇವಾಲಯ ಎಂಬುದು ಆತ್ಮೋನ್ನತಿಗೆ ಪೂರಕವಾದ ಸಂಗತಿ ಎಂದು ಹೇಳಿದ ಅವರು, ಧರ್ಮಕ್ಕೆ ಮೂಲವಾದದ್ದು ಷಟ್ ಚಕ್ರಕ್ಕೆ ಮಹಿಳೆ ಆಧಾರ ಎಂದರು.
ದೆಹಲಿಯ ವಾಗ್ನಿ ಕಾಜಲ್ ಹಿಂದುಸ್ಥಾನಿ ಧಾರ್ಮಿಕ ಉಪನ್ಯಾಸ ನೀಡಿ, ಮಾತೃಶಕ್ತಿ ಸೃಷ್ಟಿಯ ಸಂಚಲನ ಮಾಡುತ್ತದೆ. ಮಹಿಷಾಸುರನ ನಾಶ ಮಾಡಲು ದೇವಿ ಬೇಕಾಯಿತು. ಪ್ರತಿಯೊಂದು ಕಾಲದಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡುವ ಮಹಿಷಾಸುರ ಹುಟ್ಟುತ್ತಾನೆ. ಮಹಾದೇವ ಎಲ್ಲವನ್ನೂ ನಿಶ್ಚಿತಗೊಳಿಸಿದ್ದಾನೆ. ಆತನ ಮಂತ್ರಿಮಡಲದಲ್ಲಿ ಸರಸ್ವತಿ ವಿದ್ಯಾದೇವತೆಯಾಗಿ ವಿದ್ಯಾಮಂತ್ರಿ, ಲಕ್ಷ್ಮೀ ಹಣಕಾಸು ಸಚಿವೆ, ದುರ್ಗಾ ರಕ್ಷಣಾ ಸಚಿವೆಯಾಗಿ ಮೂಡಿಬರುತ್ತಾಳೆ. ಮಹಿಷಾಸುರ, ಶುಭ, ನಿಶುಂಭ, ಚಂಡ, ಮುಂಡರ ನಾಶವನ್ನು ಶ್ರೀದೇವಿಯೇ ಮಾಡಿದ್ದಾಳೆ. ಹೀಗಾಗಿ ನಾವು ಮಹಿಳೆಯರಿಗೆ ನಮ್ಮ ರಕ್ಷಣೆ ಮಾಡುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಲವ್ ಜಿಹಾದ್ ಗೆ ನಮ್ಮ ಹೆಣ್ಣುಮಕ್ಕಳು ಯಾಕೆ ಹೋಗುತ್ತಾರೆ ಎಂದು ಕೇಳಿದ ಅವರು, ಒನಕೆ ಓಬವ್ವಳಂಥ ನಾರಿಯರು ಜನಿಸಿದ ಊರು ಇದು. ಸಮಾಜದ, ಧರ್ಮದ ರಕ್ಷಣೆಯನ್ನು ಮಹಿಳೆಯೇ ಮಾಡಬೇಕಾಗುತ್ತದೆ. ಋಗ್ವೇದದಲ್ಲೇ ಮಹಿಳೆಗೆ ಪ್ರಾಶಸ್ತö್ಯ ನೀಡಿದೆ ಎಂದರು. ತಾಯಿಯರೇ ರೀಲ್ಸ್ ಮಾಡುತ್ತಿದ್ದಾರೆ. ನಮ್ಮದೇ ಮಕ್ಕಳು ಇನ್ಸ್ ಟಾಗ್ರಾಂ ನಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಗೊತ್ತಿದ್ದರೂ ಯಾರೂ ಪ್ರಶ್ನಿಸುತ್ತಿಲ್ಲ. ನಾವು ಭಾರತವನ್ನು ರಕ್ಷಿಸಬೇಕು ಎಂದಿದ್ದರೆ ಮಾತೆಯರು ಬಲಿಷ್ಠರಾಗಬೇಕು. ತಾಯಿ, ತಂದೆ ಮತ್ತು ಮಕ್ಕಳು ಒಟ್ಟಿಗೆ ಇರಬೇಕು. ಕೂಡುಕುಟುಂಬ ವ್ಯವಸ್ಥೆ ಬೇಕು. ಸ್ವರಕ್ಷಣೆ ಮಾಡಬೇಕಿದೆ. ಕೊಳಕು ವಿಚಾರ ಬಾರದಂತೆ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಕೊಂಕೋಡಿ ವಹಿಸಿದ್ದರು. ಅಭ್ಯಾಗತರಾಗಿ ಮಾಜಿ ಶಾಸಕಿ ಕೆ.ಶಕುಂತಳಾ ಶೆಟ್ಟಿ ಮಾತನಾಡಿ, ಇಲ್ಲಿ ಎಲ್ಲರೂ ಪ್ರಬುದ್ಧರು. ಇವತ್ತು ನಮಗೆ ಧರ್ಮವೇ ಕಲಿಸಿದೆ ನೀನು ಹೀಗೆ ಇರಬೇಕು ಎಂದು ಕಲಿಸಿದೆ. ನಾವು ಮೀಸಲಾತಿಗೆ ಬೇಡುವುದು ಎಂಬುದು ನಮ್ಮ ಮಹಿಳಾ ಧರ್ಮಕ್ಕೆ ಸೂಕ್ತವಲ್ಲ ಎಂದರು.
ಪತ್ರಕರ್ತೆ ಶೋಭಾ ಮಳವಳ್ಳಿ ಮಾತನಾಡಿ, ಇದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ, ಹಿಂದುಗಳಿಗೆ ಹಿಂದುಗಳ ಬಗ್ಗೆಯೇ ಅನುಮಾನ ಇರುವುದು ಖೇದಕರ, ಹಿಂದುಗಳ ಹಿಂದುವಿರೋಧಿ ಅಜೆಂಡಾಗಳ ಕುರಿತು ಎಚ್ಚರವಾಗಿರಬೇಕು. ಹೆಣ್ಣುಮಕ್ಕಳ ಮನಸ್ಥಿತಿಗೆ ತಕ್ಕಂತೆ ಗಂಡುಮಕ್ಕಳೂ ಹೊಂದಿಕೊಳ್ಳಬೇಕಾಗಿದೆ ಎಂದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ ಶುಭ ಹಾರೈಸಿದರು. ಸುಮನಾ ಫೌಂಡೇಶನ್ ಅಧ್ಯಕ್ಷೆ ಡಾ.ಸುನಿತಾ ಮಂಜುನಾಥ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ ಪುತ್ತೂರು, ಸಮಾಜಸೇವಕರಾದ ರಮಿತಾ ಸೂರ್ಯವಂಶಿ ಉಪಸ್ಥಿತರಿದ್ದರು. ಉಷಾ ಸತ್ಯನಾರಾಯಣ ಸೇರಾಜೆ ಸ್ವಾಗತಿಸಿದರು. ವೀಣಾ ಪ್ರಸಾದ್ ಕಜೆ ವಂದಿಸಿದರು. ನವ್ಯ ಕೃಷ್ಣ ಮಾಣಿಪ್ಪಾಡಿ ಮತ್ತು ಡಾ.ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಪದ್ಯಾಣ ತಿಮ್ಮಣ್ಣ ಭಟ್ಟ ಅಭಿರಾಮ, ಪದ್ಯಾಣ ರಘುರಾಮ ಕಾರಂತ, ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅರುಣ ಶಾಮ್, ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಕಾರ್ಯದರ್ಶಿ ಈಶಾನ್ಯ ಪದ್ಯಾಣ ಉಪಸ್ಥಿತರಿದ್ದರು. ಬೆಳಗ್ಗೆ ೭ರಿಂದ ವೈದಿಕ ಕಾರ್ಯಕ್ರಮಗಳು ಆರಂಭ, ಚಂಡಿಕಾಯಾಗ, ಮಧ್ಯಾಹ್ನ ಪೂಜೆ, ಸಂಜೆ ೫ರಿಂದ ಅಂಕುರ ಪೂಜೆ, ರಾತ್ರಿ ಪೂಜೆ, ಶ್ರೀ ದುರ್ಗಾಪೂಜೆ, ಅನುಜ್ಞಾಕಲಶ ಪೂರಣೆ, ಅಧಿವಾಸಹೋಮ ನಡೆಯಿತು. ಲಲಿತಾಸಹಸ್ರನಾಮ ಸಾಮೂಹಿಕ ಪಾರಾಯಣ ನಡೆಯಿತು. ಯಕ್ಷಗಾನ ತಾಳಮದ್ದಳೆ ಶಿವಭಕ್ತ ವೀರಮಣಿ. ಬಳಿಕ ನಯನಗೌರಿ ಸೇರಾಜೆ ಮತ್ತು ಬಳಗದ ಸುಗಮ ಸಂಗೀತ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಮತ್ತು ವಿದುಷಿ ಚೈತ್ರ ಈಶಾನ್ಯ ಪದ್ಯಾಣ ಅವರ ನಿರ್ದೇಶನದಲ್ಲಿ ಪದಯಾನ ತಂಡದ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರಮ ನಡೆಯಿತು. ರಾತ್ರಿ ಶಿವಸಂಭೂತ ನೃತ್ಯ ನಾಟಕ ಲಕ್ಷ್ಮೀ ಗುರುರಾಜ್ ಉಡುಪಿ ನಿರ್ದೇಶನದಲ್ಲಿ ನಡೆಯಿತು.


Be the first to comment on "ಮಹಿಳಾ ಶಕ್ತಿ ಜಾಗೃತವಾದರೆ ಸಂಸ್ಕೃತಿಯ ಉಳಿವು: ಪದ್ಯಾಣ ಮಾತೃಸಂಗಮದಲ್ಲಿ ಸಂದೇಶ"