
ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಮಾ.30ರಂದು ಏಕಾದಶ ತೀರ್ಥ ಕಲಶ ರಥ ಹಾಗೂ ಹಸಿರುವಾಣಿ ಮೆರವಣಿಗೆ ನಡೆಯಲಿದೆ.
ಗಂಗೆ, ಯಮುನೆ, ಸರಸ್ವತಿ, ನರ್ಮದಾ, ಗಂಡಕೀ, ನಾರಾಯಣಿ, ತ್ರಿಶೂಲಿ, ಸರಯೂ, ಕಾವೇರಿ, ತುಂಗೆ, ನೇತ್ರಾವತಿ ಸಹಿತ ಭಾರತದ ಪುಣ್ಯ ಪವಿತ್ರ ನದಿಗಳ ತೀರ್ಥ ಸಂಗ್ರಹ ಮಾಡಲಾಗಿದ್ದು, ಇದರ ಕಲಶವನ್ನು ಹೊತ್ತುಕೊಂಡ ರಥದ ಮೆರವಣಿಗೆ ವಿಶೇಷವಾಗಲಿದ್ದು, ಮಹಾಲಿಂಗೇಶ್ವರನಿಗೆ ಬ್ರಹ್ಮಕಲಶೋತ್ಸವ ವೇಳೆ ಈ ಪುಣ್ಯತೀರ್ಥಗಳ ಅಭಿಷೇಕ ಮಾಡಲಾಗುತ್ತದೆ.
ಹಸಿರುವಾಣಿ ಮೆರವಣಿಗೆ ಮಾ.30ರಂದು ಬೆಳಗ್ಗೆ 11.30ಕ್ಕೆ ಉಪ್ಪಿನಂಗಡಿಯ ಸಂಗಮ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಚಾಲನೆಗೊಂಡು, ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಮಠಂತಬೆಟ್ಟು, ಕೆಮ್ಮಾಯಿ, ಮಾರ್ಗವಾಗಿ ಆದರ್ಶ ಆಸ್ಪತ್ರೆ ಮುಂಭಾಗದಿಂದ ಮಧ್ಯಾಹ್ನ 12.30ಕ್ಕೆ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ರಥಬೀದಿಗೆ ಪ್ರವೇಶಿಸಲಿದೆ.
ಬಳಿಕ ಮಧ್ಯಾಹ್ನ 2.30ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯ ಮೂಲಕ ಸಾಗಿ ಸಂಜೆ 3.30ರ ವೇಳೆಗೆ ಮಿತ್ತನಡ್ಕವನ್ನು ಪ್ರವೇಶಿಸಲಿದೆ ಈ ಸಂದರ್ಭ, ವಿವಿಧ ಭಜನಾ ತಂಡಗಳು, ಚೆಂಡೆ,ಆಕರ್ಷಕ ಕವಾಯತುಗಳೊಂದಿಗೆ ನಾಡಿನ ವಿವಿಧ ಮಠಾಧೀಶರು, ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಪದ್ಯಾಣದಲ್ಲಿ ಮಾ.30ರಂದು ಏನೇನು ಕಾರ್ಯಕ್ರಮ?
ಮಾರ್ಚ್ 30, ಸೋಮವಾರ:
ಮಧ್ಯಾಹ್ನ 3.30ಕ್ಕೆ ಗ್ರಾಮ ದೈವಸ್ಥಾನ ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನದ ಸನ್ನಿಧಿಯಿಂದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿವಿಧ ಮಠಾಧೀಶರು, ಗಣ್ಯಮಾನ್ಯರ ನೇತೃತ್ವದಲ್ಲಿ ಸಂಘ, ಸಂಸ್ಥೆಗಳು, ನೃತ್ಯ ಭಜನಾ ತಂಡಗಳು, ಕೇರಳ ಚಂಡೆ, ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವದೊಂದಿಗೆ ಆಕರ್ಷಕ ಹಸಿರುವಾಣಿ ಮೆರವಣಿಗೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸುವರು. ಈ ವೇಳೆ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕಣಿಯೂರು ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.
ಸಂಜೆ 4 ಗಂಟೆಗೆ ಕ್ಷೇತ್ರಕ್ಕೆ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ. 5ರಿಂದ ಶಿಲ್ಪಿ, ಮೇಸ್ತ್ರಿಗಳಿಂದ ಪರಿಗ್ರಹ, ದೇವತಾ ಪ್ರಾರ್ಥನೆ, ಆಚಾರ್ಯಾದಿ ಋತ್ವಿಗ್ವರಣೆ, ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ಅಸ್ತ್ರಕಲಶ ಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಶಾಸ್ತಾರ ಲಿಂಗಗಳ ಜಲಾಧಿವಾಸ, ಪ್ರಾಕಾರ ಬಲಿ, ರಾತ್ರಿ ಪೂಜೆ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು. ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಕ್ಷತೆಯನ್ನು ಕರೋಪಾಡಿ ಶ್ರೀ ಮಲರಾಯ ದೈವಸ್ಥಾನ ಮತ್ತು ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ಟ ವಹಿಸುವರು. ಹಿರಿಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರದ್ಧಾ ಅಮಿತ್ ಶುಭಾಶಂಸನೆಗೈಯುವರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಎಡೆಕ್ಕಾನ ಮಹಾಬಲೇಶ್ವರ ಭಟ್, ಮೂಡುಬಿದಿರೆಯ ಜ್ಯೋತಿಷಿ ಡಾ. ಯೋಗಿ ಸುಧಾಕರ ತಂತ್ರಿ, ವಿಟ್ಲ ನವಿಲುಬಸದಿ ಅಧ್ಯಕ್ಷ ಜಿತೇಶ್ ಎಂ, ವಿಟ್ಲದ ಎಸಿಇ ಬಿಲ್ಡರ್ಸ್ ಮಾಲೀಕ ದರ್ಶನ್ ಜೆ, ಧರ್ಮಸ್ಥಳ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಇಒಐಟಿ ಪೂರನ್ ವರ್ಮ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಮತ್ತು ಕರೋಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಅನೆಯಾಲಕೋಡಿ ವಿಘ್ನೇಶ್ವರ ಭಟ್, ಬಿಜೆಪಿ ಪುತ್ತೂರು ನಗರಾಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಉಪ್ಪಿನಂಗಡಿ ಟೀಮ್ ದಕ್ಷಿಣ ಕಾಶಿ ಗೌರವಾಧ್ಯಕ್ಷ ರವಿ ಇಳಂತಿಲ ಹಾಗೂ ಬಿಜೆಪಿ ದಕ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಜ್ಯೂನಿಯರ್ ಶಂಕರ್ ಮತ್ತು ಬಳಗದಿಂದ ಗಿಲಿಗಿಲಿ ಮ್ಯಾಜಿಕ್ ನಡೆಯಲಿದೆ


Be the first to comment on "Padyana Brahmakalashotsava: ಪದ್ಯಾಣ ಬ್ರಹ್ಮಕಲಶೋತ್ಸವ: ಏಕಾದಶ ತೀರ್ಥ ಕಲಶ ರಥ, ಹಸಿರುವಾಣಿ ಮೆರವಣಿಗೆ – ಮಾರ್ಚ್ 30ರ ಕಾರ್ಯಕ್ರಮಗಳ ವಿವರ ಹೀಗಿದೆ"