ವಿಶ್ವಹಿಂದು ಪರಿಷದ್, ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಪೊಳಲಿಗೆ ಬೃಹತ್ ಪಾದಯಾತ್ರೆ ಮೂಲಕ ಏಪ್ರಿಲ್ 5ರ ಭಾನುವಾರ ನಡೆಯಲಿದೆ. ಬಂಟ್ವಾಳ ಪ್ರಖಂಡ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಬೆಳಗ್ಗೆ 5.30ಕ್ಕೆ ಪೊಳಲಿ ದ್ವಾರ, ಕಡೆಗೋಳಿ ಪುದು ತುಂಬೆಯಿಂದ ಹೊರಡಲಿದೆ. ಅದೇ ಹೊತ್ತಿಗೆ ಬಿ.ಸಿ.ರೋಡ್ ಕೈಕಂಬದ ಪೊಳಲಿ ದ್ವಾರದಿಂದ ಕಾಲ್ನಡಿಗೆ ಹೊರಡಲಿದೆ. 6.30ಕ್ಕೆ ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಮತ್ತೊಂದು ತಂಡ ಹೊರಡಲಿದ್ದು, ಸಾವಿರಾರು ಹಿಂದು ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ. ಪಾದಯಾತ್ರೆ ಹೊರಡುವ 10 ನಿಮಿಷ ಮುಂಚೆ ಉಪಸ್ಥಿತರಿದ್ದು, ಪೊಳಲಿವರೆಗೆ ನಡೆಯಲಿದ್ದಾರೆ. ಅಲ್ಲಿ ಶಾಸಕರು, ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ದೇಗುಲದ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಇದು ಪುಣ್ಯ ಕಾರ್ಯದ ಜೊತೆ ಹಿಂದು ಸಮಾಜ ರಕ್ಷಣೆಯ ಕಾರ್ಯವೂ ಹೌದು ಎಂದವರು ಪಾದಯಾತ್ರೆಯ ಉದ್ದೇಶವನ್ನು ವಿವರಿಸಿದರು.
ಕ್ಷೇತ್ರದಲ್ಲಿ ವಸ್ತ್ರಸಂಹಿತೆ ಕ್ರಮಬದ್ಧವಾಗಿ ಜಾರಿಗೊಳಿಸಬೇಕು, ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣಗೊಳ್ಳಬೇಕು, ಭೋಜನಶಾಲೆ ಹಾಗೂ ರಾತ್ರಿ ಭೋಜನ ವ್ಯವಸ್ಥೆ ಕಲ್ಪಿಸಬೇಕು, ಧಾರ್ಮಿಕ ಶಿಕ್ಷಣ ನೀಡುವ ಹಿನ್ನೆಲೆ ಬಾಲಸಂಸ್ಕಾರ ಕೇಂದ್ರದಂಥ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು, ಬಡ ಹಿಂದು ಕುಟುಂಬಗಳಿಗೆ ನೆರವಾಗುವ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಬೇಕು, ಹಿಂದುಗಳಿಗೆ ಮಾತ್ರ ಕ್ಷೇತ್ರದ ಜಾತ್ರಾ ಸಮಯದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗುವುದು ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಅಜಕಳ, ಲೋಹಿತ್ ಪಣೋಲಿಬೈಲ್ ಮತ್ತು ಸಂತೋಷ್ ಸರಪಾಡಿ ಉಪಸ್ಥಿತರಿದ್ದರು.


Be the first to comment on "ಏ.5ರಂದು ವಿಶ್ವ ಹಿಂದು ಪರಿಷದ್, ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಅಮ್ಮನೆಡೆಗೆ ನಮ್ಮ ನಡಿಗೆ"