
ಬಂಟ್ವಾಳ: ಯುದ್ಧ, ತೈಲಬಿಕ್ಕಟ್ಟು ಅಡುಗೆ ಅನಿಲವನ್ನೇ ನಂಬಿಕೊಂಡಿರುವ ಹೋಟೆಲ್ ನವರಿಗೆ ಸಮಸ್ಯೆ ಉಂಟುಮಾಡಿದೆ. ವಿವಿಧ ಭಾಗಗಳಲ್ಲಿರುವ ಸಮಸ್ಯೆ ಬಿ.ಸಿ.ರೋಡ್ ಗೂ ತಟ್ಟಿದೆ. ಸೋಮವಾರ ಇಲ್ಲಿನ ಪ್ರಸಿದ್ಧ ನಾಗ ಕ್ಯಾಂಟೀನ್ (ಹೆಗ್ಡೆ ಕ್ಯಾಂಟೀನ್) ಸಿಲಿಂಡರ್ ಕೊರತೆಯಿಂದಾಗಿ ಬಾಗಿಲು ಹಾಕಬೇಕಾಯಿತು. ಗೃಹಬಳಕೆಯ ಗ್ಯಾಸ್ ಸಮಸ್ಯೆ ಇಲ್ಲ, ಆದರೆ ಹೋಟೆಲ್ ಗಳಿಗೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಬಿ.ಸಿ.ರೋಡಿನ ಇತರ ಕೆಲವು ಊಟದ ಹೋಟೆಲ್ ಸಹಿತ ಹಲವೆಡೆ ಗ್ಯಾಸ್ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಖಾಲಿಯಾಗಿ, ವಾಪಸ್ ಕಮರ್ಷಿಯಲ್ ಸಿಲಿಂಡರ್ ಸಿಗದೇ ಇದ್ದರೆ ಬಾಗಿಲು ಹಾಕಬೇಕಷ್ಟೇ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಸರಿಸುಮಾರು ದಿನವೊಂದಕ್ಕೆ 500ರಷ್ಟು ಗ್ರಾಹಕರು ಬರುವ ಮಿನಿ ವಿಧಾನಸೌಧದ ಮುಂಭಾಗವೇ ಇರುವ ನಾಗ ಕ್ಯಾಂಟೀನ್ ಗೆ ಪ್ರತಿ ದಿನ ಬೆಳಗ್ಗಿನ ಅವಧಿಯಲ್ಲಿ ಚಹ ಸೇವನೆಗೆಂದು ಆಗಮಿಸುವವರು ವಾಪಸಾಗುತ್ತಿದ್ದಾರೆ. ಕಟ್ಟಿಗೆ ಒಲೆ ಇರುವ ಹೋಟೆಲ್ ನವರು ಸದ್ಯಕ್ಕೆ ಸಮಸ್ಯೆ ಎದುರಿಸುತ್ತಿಲ್ಲ. ಇನ್ನು ಕಚೇರಿಗಳಲ್ಲಿ ಮೀಟಿಂಗ್ ಗೆಂದು ಚಹ, ತಿಂಡಿ ಆರ್ಡರ್ ಮಾಡುವವರು, ನಿತ್ಯವೂ ಹೋಟೆಲನ್ನೇ ನಂಬಿಕೊಂಡವರು ಕಂಗಾಲಾಗಿದ್ದಾರೆ. ಮನೆಯ ಅಡುಗೆ ಅನಿಲ ವಿತರಣೆಗೆ ಸಮಸ್ಯೆ ಇಲ್ಲ ಆದರೆ ಕಮರ್ಷಿಯಲ್ ವಿತರಣೆಯ ಸಮಸ್ಯೆ ಇದೆ. ಶೀಘ್ರ ಈ ಸಮಸ್ಯೆಗೂ ಪರಿಹಾರ ದೊರಕಿಸಿಕೊಡಬೇಕು ಎಂದು ಹೋಟೆಲ್ ಮಾಲೀಕರಷ್ಟೇ ಅಲ್ಲ, ಗ್ರಾಹಕರೂ ಹೇಳುತ್ತಿದ್ದಾರೆ.



Be the first to comment on "ಬಂಟ್ವಾಳ, ಬಿ.ಸಿ.ರೋಡಿಗೂ ತಟ್ಟಿದ ‘ಗ್ಯಾಸ್’ ಪ್ರಾಬ್ಲಂ: ಹೆಗ್ಡೆ (ನಾಗ) ಕ್ಯಾಂಟೀನ್ ಬಂದ್, ಹಲವು ಹೋಟೆಲ್ ಗಳಿಗೆ ಸಂಕಷ್ಟ"