ಸಣ್ಣ ಮಕ್ಕಳಿಗೆ ಕಷ್ಟ, ದೊಡ್ಡವರೂ ಹೈಜಂಪ್ ಮಾಡಬೇಕು. ಕಲ್ಲಡ್ಕ ಪೇಟೆಯ ಹೃದಯಭಾಗದಲ್ಲಿರುವ ಈ ಬಸ್ ನಿಲ್ದಾಣದೊಳಗೆ ಪ್ರವೇಶಿಸುವುದೇ ದೊಡ್ಡ ಸವಾಲು.

2011ರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ 5 ಲಕ್ಷ ರೂ ವೆಚ್ಚದಲ್ಲಿ ಆಗಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅನುದಾನದಲ್ಲಿ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಪೇಟೆಯಲ್ಲಿ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಇದೀಗ ಬಣ್ಣ ಮಾಸಿದ ಏಳು ಕಂಬಗಳ ಮಧ್ಯೆ ಪೈಪ್ ನ ತಡೆಬೇಲಿಯಂಥ ರೀತಿಯಲ್ಲಿ ಯಾರೂ ಒಳಪ್ರವೇಶಿಸದಂತೆ ಮಾಡಿರುವ ನಿಲ್ದಾಣದಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಒಂದು ಬದಿಯಲ್ಲಿ ವಿಟ್ಲಕ್ಕೆ ತೆರಳುವ ಬಸ್ಸುಗಳು, ಮತ್ತೊಂದು ಬದಿಯಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳನ್ನು ಹತ್ತಲು ಕಾಯುವ ಪ್ರಯಾಣಿಕರಿಗೆ ಈ ನಿಲ್ದಾಣ ಅನುಕೂಲ. ಸಮೀಪವೇ ಶಾಲೆ, ಕಾಲೇಜುಗಳು, ಪ್ರಾರ್ಥನಾ ಮಂದಿರಗಳು, ಶುಭ ಸಮಾರಂಭ ನಡೆಯುವ ಹಾಲ್ ಗಳು ಇದ್ದು, ಸುಡುಬಿಸಿಲು, ರಣಮಳೆಯಲ್ಲೂ ಪ್ರಯಾಣಿಕರಿಗೆ ಇದೇ ತಂಗುದಾಣ ಆಶ್ರಯ. ಆದರೆ ಒಳಗೆ ಹೋಗಲು ಆಗದೆ ತೊಂದರೆ.
ಅಲ್ಲಿ, ಇಲ್ಲಿ ಸುತ್ತಾಡುವ ದನ, ಶ್ವಾನಗಳು ಒಳಪ್ರವೇಶಿಸುತ್ತವೆ, ಹಾಗೆಯೇ ಅಲೆಮಾರಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಆತಂಕದಿಂದ ಇಲ್ಲಿ ಕಬ್ಬಿಣದ ಬೇಲಿಯನ್ನು ಹಾಕಲಾಗಿದೆ. ಆದರೆ ಇದು ಮನುಷ್ಯರಿಗೇ ತೊಂದರೆಯಾಗುತ್ತಿದೆ.
ಗರ್ಭಿಣಿಯರೂ ಹೊರಗೆ ನಿಲ್ಲಬೇಕು:
ಬಸ್ ಗಾಗಿ ಕಾಯುವ ಗರ್ಭಿಣಿಯರು, ಅಶಕ್ತರು, ವೃದ್ಧರು ಇಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದೆ, ನಿಂತುಕೊಳ್ಳಲು ಆಗದೆ ಅಸಹಾಯಕರಾಗಿ ಹೊರಗೆ ನಿಂತ ದೃಶ್ಯ ಕಂಡುಬಂತು. ಬಸ್ ನಿಲ್ದಾಣದ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ಅಪೇಕ್ಷಣೀಯವೇ ಸರಿ. ಆದರೆ ಮನುಷ್ಯರಿಗೂ ಪ್ರವೇಶಿಸಲಾಗದಂಥ ಸ್ಥಿತಿ ನಿರ್ಮಾಣವಾದರೆ ಎಲ್ಲರಿಗೂ ತೊಂದರೆ. ಹೀಗಾಗಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿದರೆ, ಎಲ್ಲರಿಗೂ ಅನುಕೂಲ. ಬಿಸಿಲಿನ ತಾಪ ದಿನೇ ದಿನೇ ಏರುತ್ತಿರುವ ಹೊತ್ತಿನಲ್ಲಿ ಬಸ್ ನಿಲ್ದಾಣದ ಸೂರಿನಡಿ ನಿಲ್ಲುವ ಅವಕಾಶವನ್ನು ಆಡಳಿತ ಕಲ್ಪಿಸಬೇಕಾಗಿದೆ.
ಇಲ್ಲಿ ಬಸ್ ಬರುವವರೆಗೆ ಕಾಯಲು ಅನುಕೂಲವಾದ ವ್ಯವಸ್ಥೆಯನ್ನು ಆಡಳಿತ ಕಲ್ಪಿಸಬೇಕು. ಪ್ರಯಾಣಿಕಸ್ನೇಹಿ ಬಸ್ ತಂಗುದಾಣ ನಿರ್ಮಾಣವಾಗಬೇಕು ಎಂದು ಸ್ಥಳೀಯರಾದ ರಾಜೀವ ಕೊಟ್ಟಾರಿ ಹೇಳಿದರು.
ಈ ತಂಗುದಾಣದಲ್ಲಿ ಜನರು ನಿಲ್ಲಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಮಾಡಲಾಗುವುದು. ಪ್ರಯಾಣಿಕರು ಒಳಗೆ ಪ್ರವೇಶಿಸಲು ಬೇಕಾದ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಗೋಳ್ತಮಜಲು ಗ್ರಾಪಂ ಪಿಡಿಒ ಸುನಿಲ್ ಹೇಳಿದರು.


Be the first to comment on "ಕಲ್ಲಡ್ಕದ ಪ್ರಯಾಣಿಕರ ತಂಗುದಾಣವೇ ವಿಚಿತ್ರ, ಹೊರಗೇ ಬಸ್ ಗೆ ಕಾಯಬೇಕಾದ ಪರಿಸ್ಥಿತಿ"