
ʼತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ದಂಡ ವಿಧಿಸುತ್ತಿಲ್ಲʼ ಎಂಬ ಶೀರ್ಷಿಕೆಯಡಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವಿಷಯದ ಬಗ್ಗೆ ವಿಧಾನ ಪರಿಷತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ಶಾಸಕ ಕಿಶೋರ್ ಕುಮಾರ್ ಪುತ್ತೂರು ಪ್ರಸ್ತಾಪಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ 1 ಲಕ್ಷದವರೆಗೆ ದಂಡ ವಿಧಿಸುವ ಕಾನೂನು ಇದ್ದರೂ ಅದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸದಿರುವ ಪರಿಣಾಮ ಸಂಪೂರ್ಣ ಸ್ವಚ್ಚತೆ ಸಾಧಿಸಲು ಸಾಧ್ಯವಾಗುತ್ತಿಲ್ಲವೆಂದು ಮಾದರಿ ಗ್ರಾಮ ಅಭಿಯಾನ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕ ಮತ್ತು ರಾಷ್ಟ್ರೀಯ ನಿರ್ಮಲ ಗ್ರಾಮ ಪ್ರಶಸ್ತಿ ಪುರಸ್ಕೃತ ಜನ ಶಿಕ್ಷಣ ಟ್ರಸ್ಟ್ ಜಂಟಿ ಆಶ್ರಯದಲ್ಲಿ ನಡೆದ ಸಮುದಾಯ ಆರೋಗ್ಯ ಅರಿವು ಅಭಿಯಾನ ಕಸ ಮುಕ್ತ ಗ್ರಾಮ- ಕ್ಯಾನ್ಸರ್ ಮುಕ್ತ ಗ್ರಾಮ- ಸ್ವಚ್ಚ ಮನೆ ಸ್ವಯಂ ಘೋಷಣೆ, ಸಂವಾದ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಕಳವಳ ವ್ಯಕ್ತಪಡಿಸಿದನ್ನು ಉಲ್ಲೇಖಿಸಿದ ಶಾಸಕರು, ಸ್ವಚ್ಚತೆಯ ವಿಷಯದಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಸಾರ್ವಜನಿಕರು ರಸ್ತೆ ಬದಿ,ಚರಂಡಿ,ನದಿ ಸೇರಿದಂತೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತಿದ್ದು ಸ್ವಚ್ಚತೆಯ ಬಗ್ಗೆ ತಮ್ಮ ಸಾಮಾಜಿಕ ಬದ್ಧತೆಯನ್ನುತೋರುತ್ತಿಲ್ಲ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಒಣ ಮತ್ತು ಹಸಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಗರಿಷ್ಠ ದಂಡ ವಿಧಿಸಿ ವಸೂಲಿ ಮಾಡಬೇಕು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವುದನ್ನು ನಿಯಂತ್ರಿಸಲು ದಂಡ ವಿಧಿಸುವ ಮತ್ತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರವನ್ನು ಪೊಲೀಸ್ ಇಲಾಖೆಗೂ ನೀಡಬೇಕು ಮತ್ತು ಜಿಲ್ಲಾ ಹೆದ್ದಾರಿ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಸ ಬಿಸಾಡುವುದನ್ನು ನಿಯಂತ್ರಿಸಲು ಸಂಬಂಧಪಟ್ಟ ಆಯಾ ಇಲಾಖೆಗಳು ಕ್ರಮವಹಿಸಬೇಕು. ಅರಣ್ಯ ಪ್ರದೇಶ ಮತ್ತು ವಿವಿಧ ಹೆದ್ದಾರಿಗಳು ಹಾದು ಹೋಗುವ ಅರಣ್ಯ ಭಾಗಗಳಲ್ಲಿ ಬೇಕಾಬಿಟ್ಟಿ ಕಸ ಬೀಸಾಡುವುದನ್ನು ತಡೆಯಲು ದಂಡ ವಿಧಿಸುವ ಮತ್ತು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವ ಅಧಿಕಾರವನ್ನು ಅರಣ್ಯ ಇಲಾಖೆಗೂ ನೀಡಬೇಕು ಈ ಎಲ್ಲಾ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ವಚ್ಚತೆಯ ಬಗ್ಗೆ ಪ್ರಸ್ತುತವಿರುವ ನಿಯಮಗಳನ್ನು ಇನ್ನಷ್ಟು ಬಲಪಡಿಸಿ ರಾಜ್ಯದಾದ್ಯಂತ ಸದರಿ ನಿಯಮವು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಸ್ವಚ್ಛ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದರು.



Be the first to comment on "ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಗರಿಷ್ಠ ದಂಡ ವಿಧಿಸಿ ವಸೂಲಿ ಮಾಡಿ: ವಿಧಾನಪರಿಷತ್ತಿನಲ್ಲಿ ಕಿಶೋರ್ ಕುಮಾರ್ ಪುತ್ತೂರು"