ಬೆಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ತೀವ್ರ ಪೊಲೀಸ್ ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಸದನದಲ್ಲಿ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಸರ್ಕಾರವನ್ನು ಬಲವಾಗಿ ಆಗ್ರಹಿಸಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಆದಷ್ಟು ಬೇಗ ಪೊಲೀಸ್ ನೇಮಕಾತಿ ಮಾಡಿ ಸಿಬ್ಬಂದಿ ಕೊರತೆ ನೀಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಕಿಶೋರ್ ಕುಮಾರ್ ಅವರು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆ ಇದ್ದು . ನಿಯಮದ ಪ್ರಕಾರ 15% ಮಾತ್ರ ಸಿಬ್ಬಂದಿ ಕೊರತೆ ಇರಬೇಕು. ಆದರೆ ಅನ್ಯ ಜಿಲ್ಲೆಯಿಂದ ಬಂದು 10 ವರ್ಷ ಸೇವೆ ಸಲ್ಲಿಸಿದ 64 ಸಿಬ್ಬಂದಿ ವರ್ಗಾವಣೆ ಮೂಲಕ ತಮ್ಮ ಊರಿಗೆ ಮರಳಲು ಡಿಜಿಪಿಯವರಿಂದ ಆದೇಶ ಪಡೆದಿದ್ದಾರೆ. ಅವರು ವರ್ಗಾವಣೆಯಾಗಿ ಹೋದಲ್ಲಿ ಸಿಬ್ಬಂದಿ ಕೊರತೆ 22% ಗೆ ಏರಿಕೆಯಾಗಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಬಲ ಕಮ್ಮಿಯಾಗಲಿದೆ. ಒಂದೊಂದು ಪೊಲೀಸ್ ಠಾಣೆಗೆ ಕನಿಷ್ಠ 40 ಸಿಬ್ಬಂದಿ ಇರಬೇಕಾದ ಕಡೆ, ಕೇವಲ 20 ಜನರಿಂದ ಕಾರ್ಯನಿರ್ವಹಿಸುವುದು ಅಸಾಧ್ಯ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಂಗಳೂರು ನಗರವು ಶೈಕ್ಷಣಿಕ, ವಾಣಿಜ್ಯ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಮತ್ತು ಕೇರಳ ಗಡಿಭಾಗವನ್ನು ಹೊಂದಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ವ್ಯವಸ್ಥೆ ಬಲವಾಗಿರಬೇಕು. ಪ್ರಸ್ತುತ ಡ್ರಗ್ಸ್ ಮಾಫಿಯಾ, ಸೈಬರ್ ಕ್ರೈಮ್, ನಕಲಿ ಅಂಕಪಟ್ಟಿ ಜಾಲ ಹಾಗೂ ಡಿಜಿಟಲ್ ಅರೆಸ್ಟ್‌ನಂತಹ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ದಿನೇ ದಿನೇ ಬೆಳೆಯುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪ್ರಸ್ತುತ ಇರುವ ಸಿಬ್ಬಂದಿ ಸಾಲುತ್ತಿಲ್ಲ ಎಂದು ಅವರು ಅಂಕಿ-ಅಂಶಗಳ ಸಮೇತ ವಿವರಿಸಿದರು (2023ರಲ್ಲಿ 3354, 2024ರಲ್ಲಿ 3813 ಪ್ರಕರಣಗಳು ದಾಖಲಾಗಿವೆ).

ಈ ಸಮಸ್ಯೆಗೆ ಪರಿಹಾರ ಸೂಚಿಸಿದ ಅವರು, ಪ್ರಸ್ತುತ ಇರುವ 150 ಹೆಡ್ ಕಾನ್‌ಸ್ಟೇಬಲ್‌ಗಳಲ್ಲಿ 44 ಜನರನ್ನು ASI ದರ್ಜೆಗೆ ಮತ್ತು 44 ಎಎಸ್‌ಐಗಳಲ್ಲಿ 16 ಜನರನ್ನು ಪಿಎಸ್‌ಐ ಆಗಿ ಆಂತರಿಕ ಭಡ್ತಿ ನೀಡಿ, ಅವರ ಸ್ಥಾನಕ್ಕೆ ಹೊಸ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಬೇಕು. ಆ ಮೂಲಕ ಮಂಗಳೂರಿನ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


Be the first to comment on "ಮಂಗಳೂರು ಪೊಲೀಸ್ ಕಮಿಷನರೇಟ್: 200ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ನೀಗಿಸಲು ಸದನದಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ – ಶೀಘ್ರ ನೇಮಕಾತಿಗೆ ಗೃಹ ಸಚಿವರ ಭರವಸೆ"