2018ರ ವಿಧಾನಸಭಾ ಚುನಾವಣೆ ಸಂದರ್ಭ, ಮಂಗಳೂರಿನ ಜನರಷ್ಟೇ ಅಲ್ಲ, ಬಂಟ್ವಾಳದವರೂ ಕುಡಿಯುವ ಜೀವಜಲ ನೇತ್ರಾವತಿ ನದಿಗೆ ಬಂಟ್ವಾಳ ಸುತ್ತಮುತ್ತ ಕೊಳಚೆ ನೀರು ಸೇರುತ್ತಿರುವುದು ಚುನಾವಣಾ ಪ್ರಚಾರದ ವಸ್ತುವಾಗಿತ್ತು. ಈ ಕುರಿತು ಸಾಕಷ್ಟು ಟೀಕೆ, ಪ್ರತಿಟೀಕೆಗಳು, ಚರ್ಚೆಗಳು ನಡೆದವು. ಈಗ 2026.

ಮಾಧ್ಯಮಗಳಲ್ಲಿ ಸತತವಾಗಿ ವರದಿಯಾಗುತ್ತಿರುವುದನ್ನು ಗಮನಿಸಿ ಮಂಗಳೂರಿನ ಜಾಗೃತ ಹಿರಿಯ ನಾಗರಿಕರು ಸ್ಥಳ ಸಮೀಕ್ಷೆ ಮಾಡಿ ಮಂಗಳೂರಿನಲ್ಲಿ ಸಂಬಂಧಪಟ್ಟ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವಿಷಯದಲ್ಲಿ ಆಡಳಿತ ಮೌನಕ್ಕೆ ಶರಣಾಗುವುದು ಜನರ ಆರೋಗ್ಯ ದೃಷ್ಟಿಯಿಂದ ಹಿತಕಾರಿಯಲ್ಲ ಎಂದು ಸಲಹೆ ನೀಡಿದ್ದ ಮನವಿ ಅಲ್ಲೇ ಬಾಕಿಯಾಗಿದೆ. ಪರಿಸ್ಥಿತಿ ಇಂದಿಗೂ ಹಾಗೇ ಇದೆ.
ನೀರೆತ್ತುವ ಜಾಗದಲ್ಲೇ ಕೊಳಚೆ:
ಬಂಟ್ವಾಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರೊದಗಿಸಲು ನೀರೆತ್ತುವ ಜಾಗಗಳಲ್ಲೇ ಕೊಳಚೆ ನದಿಗೆ ಸೇರುತ್ತಿದೆ. ಕುಡಿಯುವ ನೀರು ಎಂದೇ ಪರಿಗಣಿಸಲಾದ ಜಕ್ರಿಬೆಟ್ಟು ಡ್ಯಾಂನಲ್ಲಿದ್ದ ನೀರು ಸಂಗ್ರಹದಲ್ಲೇ ಸ್ನಾನ, ಶೌಚಾದಿಗಳನ್ನು ವಲಸೆ ಕಾರ್ಮಿಕರ ತಂಡ ಮಾಡುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಕಾಲುವೆಯಿಂದ ಹೆಪ್ಪುಗಟ್ಟಿದ ಕೊಳಚೆ ನೀರು ಕಾಣಿಸುತ್ತಿತ್ತು.

ಬಂಟ್ವಾಳ ಬಸ್ತಿಪಡ್ಪು ಬಳಿಯೂ ಕಾಲುವೆಯಿಂದ ಬಿರುಬೇಸಗೆಯಲ್ಲೂ ಕೊಳಚೆ ನದಿಗೆ ಪ್ರವೇಶಿಸುತ್ತಿದ್ದರೆ, ನದಿದಡದ ಉದ್ದಕ್ಕೂ ಪೈಪ್ ಅನ್ನೇ ನದಿಗೆ ಇಟ್ಟು, ತ್ಯಾಜ್ಯಗಳೆಲ್ಲಾ ಕುಡಿಯುವ ನೀರು ಪಾಲಾಗುವಂಥ ಸನ್ನಿವೇಶ ಸೃಷ್ಟಿಯಾಗಿದೆ.
ಒಳಚರಂಡಿ ವ್ಯವಸ್ಥೆಯೇ ಇಲ್ಲ:
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಆದರೆ ದಿನನಿತ್ಯವೂ ಸುಮಾರು 10 ಸಾವಿರಕ್ಕೂ ಅಧಿಕ ಮನೆಗಳ ಕೊಳಚೆ ನೀರು ನದಿಯ ಒಡಲು ಸೇರುತ್ತಿದೆ. ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ಗಳ ನಿರ್ಮಾಣಕ್ಕೆ ಜಾಗದ ವಿವಾದ ಅಂತಿಮಗೊಳ್ಳದೇ ಇರುವುದರಿಂದ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಸಾಧ್ಯವಾಗಿಲ್ಲ. ಹಲವು ವರ್ಷಗಳ ಹಿಂದೆ ಪೈಪುಲೈನ್ ಅಳವಡಿಸಿ ಅಲ್ಲಲ್ಲಿ ಮ್ಯಾನ್‌ಹೋಲ್‌ಗಳನ್ನು ಮಾಡಿದ್ದರೂ ವೇಸ್ಟ್ ಆಗಿದೆ.
ಬಡ್ಡಕಟ್ಟೆ, ಕೆಳಗಿನ ಪೇಟೆ, ಕಂಚಿಗಾರ ಪೇಟೆ, ಗೂಡಿನಬಳಿ, ಕೈಕುಂಜೆ, ಪಾಣೆಮಂಗಳೂರು, ಪರ್ಲಿಯಾ, ತಲಪಾಡಿವರೆಗೆ ಹಲವು ಕಡೆಗಳಲ್ಲಿ ಮೋರಿ, ರಾಜಕಾಲುವೆಗಳ ಮೂಲಕ ಹರಿದು ಹೋಗುವ ಕೊಳಚೆ ನೀರು ನೇರವಾಗಿ ನದಿ ಸೇರುತ್ತಿದೆ. ಮನೆಗಳು, ವಸತಿ ಸಮುಚ್ಚಯಗಳ ಶೌಚಾಲಯಗಳ ನೀರು, ಹೋಟೆಲ್ ತ್ಯಾಜ್ಯಗಳು, ಕೋಳಿ ಸಹಿತ ಮಾಂಸದಂಗಡಿಗಳ ನೀರು ಸೇರಿದಂತೆ ಎಲ್ಲಾ ರೀತಿಯ ಕೊಳಚೆ ನೀರು ಕೂಡ ನೇರವಾಗಿ ನದಿ ಸೇರುತ್ತಿದೆ ಎಂದು ಕಳೆದ ಬಾರಿಯೇ ಪುರಸಭೆ ಹಿರಿಯ ಸದಸ್ಯರಾಗಿದ್ದ ಎ. ಗೋವಿಂದ ಪ್ರಭು ಆಪಾದಿಸಿದ್ದರು.
ವಸತಿ ಸಮುಚ್ಚಯಗಳು ತಮ್ಮಲ್ಲೇ ಎಸ್‌ಟಿಪಿಗಳನ್ನು ಮಾಡಿ ಕೊಳಚೆಯನ್ನು ಶುದ್ಧೀಕರಿಸಿಯೇ ಹೊರಗೆ ಬಿಡಬೇಕು ಎಂಬ ನಿಯಮವಿದ್ದರೂ, ಬಂಟ್ವಾಳ ನಗರ ವ್ಯಾಪ್ತಿಯ ಬಹುತೇಕ ವಸತಿ ಸಮುಚ್ಚಯಗಳು ಎಷ್ಟು ಪಾಲಿಸುತ್ತಿದ್ದಾರೆ ಎಂಬ ಕುರಿತು ಪುರಸಭೆ ಸರ್ವೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಪ್ಲಾಸ್ಟಿಕ್ ಮತ್ತು ಕೊಳಚೆಯನ್ನು ನದಿ ನೀರಿಗೆ ಬಿಡುವುದು ಸರಿಯಲ್ಲ. ಆಡಳಿತ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಎಸೆಯುವವರ ವಿರುದ್ಧ ಶಿಕ್ಷೆ ಆಗುತ್ತದೇ ಎಂಬುದು ಜಾರಿಯಾಗಬೇಕು.ಎನ್ನುತ್ತಾರೆಜನಶಿಕ್ಷಣ ಟ್ರಸ್ಟ್ ಸ್ಥಾಪಕ ಶೀನ ಶೆಟ್ಟಿ
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನದಿಗೆ ಕೊಳಚೆ ನೀರು ಹೋಗುವುದರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಹೇಳಿದರು.


Be the first to comment on "ನೇತ್ರಾವತಿ ಒಡಲಿಗೆ ಕಲುಷಿತ ನೀರು, ತ್ಯಾಜ್ಯಕ್ಕೆ ಬಿದ್ದಿಲ್ಲ ಕಡಿವಾಣ"