ಬಂಟ್ವಾಳದ ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ಮಾರ್ಚ್ 7ರಂದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಗ್ರಾಮದಲ್ಲಿ ಬಂಟ್ವಾಳ ಕಂಬಳ ನಡೆಯಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದಾರೆ.

ಬಂಟ್ವಾಳದಲ್ಲಿ ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗುರುವಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು

ಈ ಬಾರಿ ಕಂಬಳದಲ್ಲಿ ಆಹಾರ ಮೇಳ ವಿಶೇಷತೆಗಳಲ್ಲಿ ಒಂದಾಗಿದ್ದು, ಪಾರ್ಕಿಂಗ್ ಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ರಸ್ತೆಯನ್ನು ಸಮೀಪ ನಿರ್ಮಿಸಲಾಗಿದ್ದು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಹಲವು ವರ್ಷಗಳಿಂದ ಈ ಕಂಬಳ ತನ್ನ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದ್ದು, ಚಿತ್ರತಾರೆಯರ ಸಹಿತ ಗಣ್ಯರು ವೀಕ್ಷಿಸಿದ್ದಾರೆ ಎಂದರು.

ಬೆಳಗ್ಗೆ 8.45ಕ್ಕೆ ಉದ್ಗಾಟನಾ ಸಮಾರಂಭದಲ್ಲಿ ಸೋಲೂರು ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ. ಸಂತೋಷ್ ಗುರೂಜಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಚರ್ಚ್ ಧರ್ಮಗುರು ವಂ.ರಾಬರ್ಟ್ ಡಿಸೋಜ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿರುವರು. ಸಚಿವರಾದ ದಿನೇಶ್ ಗುಂಡೂರಾವ್, ಡಾ. ಜಿ. ಪರಮೇಶ್ವರ್, ರಾಮಲಿಂಗಾರೆಡ್ಡಿ ಸಹಿತ ಹಲವು ಗಣ್ಯರು ಭಾಗವಹಿಸುವರು ಎಂದರು.
ಕಂಬಳ ಸಮಿತಿ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಸಂಚಾಲಕ ಬಿ.ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಫಿಲಿಪ್ ಫ್ರೇಂಕ್, ಉಪಾಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಚಂದ್ರಶೇಖರ ಭಂಡಾರಿ, ಬಿ.ಆರ್.ಅಂಚನ್, ಅಬ್ಬಾಸ್ ಆಲಿ, ಪ್ರಮುಖರಾದ ಇಬ್ರಾಹಿಂ ನವಾಝ್ ಹಾಗೂ ಕಂಬಳ ಸಮಿತಿಯ ನಾನಾ ಪದಾಧಿಕಾರಿಗಳು, ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.


Be the first to comment on "ಮಾ.7ರಂದು ರೈ ನೇತೃತ್ವದಲ್ಲಿ ಬಂಟ್ವಾಳ ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ"