
ಕಾಸರಗೋಡು: ಸಂಶೋಧನಾ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿಭಾಗವು ಹಮ್ಮಿಕೊಂಡ ಉಪನ್ಯಾಸವು ಮಹತ್ವಪೂರ್ಣ ಎನಿಸಿಕೊಂಡಿದೆ, ಎಂದು ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ಪ್ರವೀಣ ಪದ್ಯಾಣ ಹೇಳಿದರು. ಇತ್ತೀಚೆಗೆ ಅಲ್ಲಿ ನಡೆದ ‘ಸಂಶೋಧನಾ ತರಂಗ’ ಉಪನ್ಯಾಸ ಮಾಲಿಕೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಾಲಿಕೆಯ ಮೊದಲ ತರಂಗದ ಸಂಪನ್ಮೂಲ ವ್ಯಕ್ತಿ, ಸಂಶೋಧನಾರ್ಥಿ ಶಶಾಂಕ್ ಹೆಚ್. ವಿ ಅವರು “ಡಾ. ಎಸ್. ಎಲ್ ಭೈರಪ್ಪನವರ ಆತ್ಮಕಥೆ ಭಿತ್ತಿ: ನೆಲೆ, ಬೆಲೆ” ಎಂಬ ವಿಷಯದ ಕುರಿತು ಮಾತನಾಡಿ, ಭೈರಪ್ಪನವರ ಆತ್ಮಕಥೆ ಭಿತ್ತಿಯು ವ್ಯಕ್ತಿಜೀವನದ ವಿವರಗಳೊಂದಿಗೆ, ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ, ತುರ್ತುಪರಿಸ್ಥಿತಿಯ ವಿಪ್ಲವ ಮುಂತಾದ ಅನೇಕ ಸಮಾಜೋ ರಾಜಕೀಯ ಐತಿಹಾಸಿಕ ಘಟನೆಗಳನ್ನೂ ತನ್ನ ಒಡಲಲ್ಲಿ ಇರಿಸಿಕೊಂಡಿದೆ ಎಂದು ಬಣ್ಣಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ರಾಜು ಕೆ. ಎಂ. ಮತ್ತು ಶ್ರೀ ಚೇತನ್ ಮುಂಡಾಜೆ ಮಾತನಾಡಿ ಮಾಲಿಕೆಗೆ ಶುಭ ಹಾರೈಸಿದರು.

ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಸಕ್ರಿಯವಾಗಿ ಸಂವಾದದಲ್ಲಿ ಭಾಗವಹಿಸಿದರು. ಸೈಯದ್ ನದೀಮ್, ಚೇತನಾ, ಸೋಮ ನಿಂಗ ಹಿಪ್ಪರಗಿ ಆಶಯ ಗೀತೆ ಹಾಡಿದರು. ಚೇತನ ಕೆ ಅವರು ಕಾರ್ಯಕ್ರಮ ನಿರೂಪಿಸಿದರು. ಶೃತಿ ಅವರು ಸ್ವಾಗತಿಸಿ, ಸಹನಾ ಅವರು ವಂದಿಸಿದರು.


Be the first to comment on "ಕೇರಳ ಕೇಂದ್ರೀಯ ವಿವಿಯ ಕನ್ನಡ ವಿಭಾಗದಲ್ಲಿ ‘ಸಂಶೋಧನಾ ತರಂಗ’ ಉಪನ್ಯಾಸ ಮಾಲಿಕೆಯ ಉದ್ಘಾಟನೆ"