ಬಿ.ವಿ.ಕಾರಂತ ಹುಟ್ಟಿದ ತಾಲೂಕಲ್ಲಿ ಸುಸಜ್ಜಿತ ರಂಗಮಂದಿರವೇ ಇಲ್ಲ

| ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪರದಾಟ | ತಾಲೂಕು ಕೇಂದ್ರದಲ್ಲಿ ಜಾಗವೇ ದೊರಕಿಲ್ಲ

ದೇಶ, ವಿದೇಶಗಳಲ್ಲಿ ಹೆಸರು ಮಾಡಿದ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತ (ಬಾಬುಕೋಡಿ ವೆಂಕಟರಮಣ ಕಾರಂತ) ಹುಟ್ಟಿದ ತಾಲೂಕು ಬಂಟ್ವಾಳದಲ್ಲಿ ಇದುವರೆಗೂ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಿಲ್ಲ. ಕನ್ನಡ, ತುಳು ರಂಗಭೂಮಿಗೆ ಸಾಕಷ್ಟು ನಟ, ನಿರ್ದೇಶಕರನ್ನು ಒದಗಿಸಿದ ತಾಲೂಕು ಬಂಟ್ವಾಳ. ಆದರೆ ತಾಲೂಕು ಕೇಂದ್ರಸ್ಥಾನದಲ್ಲಿ ಕಾರ್ಯಕ್ರಮ ಏರ್ಪಡಿಸಲು ಯಾವುದಾದರೂ ಹಾಲ್ ಫ್ರೀ ಇದೆಯೇ ಎಂದು ಹುಡುಕಬೇಕಾದ ಪರಿಸ್ಥಿತಿ.

ದಶಕಗಳ ಹಿಂದೆ ಪಂಜೆ ಮಂಗೇಶರಾಯರ ಹೆಸರಿನಲ್ಲಿ ಸಮಿತಿಯೊಂದು ಅಸ್ತಿತ್ವಕ್ಕೆ ಬಂದು ಬಿ.ಸಿ.ರೋಡಿನ ಸರಕಾರಿ ಜಾಗವೊಂದನ್ನು ಬಯಲು ರಂಗಮಂದಿರ ನಿರ್ಮಾಣಕ್ಕೆಂದು ಕೋರಿತ್ತು. ಆದರೆ ಅದರ ಬದಲು ಪಂಜೆ ಭವನ ನಿರ್ಮಾಣ ಮಾಡುತ್ತೇವೆ ಎಂದು ಹೊರಟ ಆಡಳಿತಕ್ಕೆ ಇನ್ನೂ ಕಟ್ಟಡ ಪೂರ್ಣ ನಿರ್ಮಿಸಲು ಆಗಿಲ್ಲ. ಇಂದಿಗೂ ದುಬಾರಿ ಬಾಡಿಗೆ ತೆತ್ತು, ನಾಟಕ ಆಯೋಜಿಸುವ ಪರಿಸ್ಥಿತಿ ಸಂಘಟಕರದ್ದು.

ಜಾಹೀರಾತು

ಬೇರೆಲ್ಲಿದೆ ಜಾಗ?

ಹುಟ್ಟೂರು ಮಂಚಿಯಲ್ಲಿ ಸ್ಥಾಪನೆಯಾದ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಬೇಡಿಕೆಗೆ ಮನ್ನಿಸಿ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಮಂಚಿಯಲ್ಲಿ 1 ಎಕರೆ ಜಾಗವನ್ನು ಟ್ರಸ್ಟ್ ನ ರಂಗಚಟುವಟಿಕೆಗೆಂದು ಮಂಜೂರು ಮಾಡಿತ್ತು. ಇಲ್ಲಿ ರಂಗಮಂದಿರ ಸಹಿತ ರಂಗಚಟುವಟಿಕೆಗಳು, ಪ್ರದರ್ಶನಕ್ಕೆ ಪೂರಕವಾದ ಕಾರ್ಯಕ್ರಮಕ್ಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಬಯಲು ರಂಗಭೂಮಿ ಚಟುವಟಿಕೆಗೆಂದು ವೇದಿಕೆ ನಿರ್ಮಿಸಲಾಗಿತ್ತು, ಅದರ ಮುಂಭಾಗ ಇರುವ ಸರಕಾರಿ ಜಾಗವನ್ನು ಸಾಂಸ್ಕೃತಿಕ ಚಟುವಟಿಕೆಗಳ ಬಳಕೆಗೆ ತಾಲೂಕು ಆಡಳಿತ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಪೂರಕವಾದ ಸ್ಪಂದನೆ ಇದುವರೆಗೂ ಸಿಗಲಿಲ್ಲ. ಇದನ್ನು ಸಾರ್ವಜನಿಕರಿಗೆ ರಂಗಾಸಕ್ತರಿಗೆ ಬಳಕೆಯಾಗುವಂತೆ ಒದಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ತಿಳಿಸಿದ್ದಾರೆ. ಇಡೀ ತಾಲೂಕು ಪ್ರತಿನಿಧಿಸುವ ರಂಗಮಂದಿರವೊಂದರ ನಿರ್ಮಾಣಕ್ಕೆ ಆಡಳಿತ ನಿರಾಸಕ್ತಿ ವಹಿಸಿರುವುದು ಖೇದನೀಯ. ಬಿ.ವಿ.ಕಾರಂತ ಹುಟ್ಟಿದ ಬಂಟ್ವಾಳ ತಾಲೂಕು ಕೇಂದ್ರದಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಸ್ಥಾನವಿಲ್ಲ ಎಂಬುದೇ  ಬೇಸರ. ಸತತವಾಗಿ ಬೇಡಿಕೆಗಳನ್ನು ಮಂಡಿಸುತ್ತಿದ್ದರೂ ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರಕುತ್ತಿಲ್ಲ ಎಂದು ರಂಗಕರ್ಮಿ ಮಹಾಬಲೇಶ್ವರ ಟಿ. ಹೆಬ್ಬಾರ ತಿಳಿಸಿದ್ದಾರೆ.

ಹಳೆಯ ರಂಗಮಂದಿರ ಹೀಗಿತ್ತು

ದಶಕಗಳ ಕಾಲ ಬಂಟ್ವಾಳದ ಜನರ ಸಾಂಸ್ಕೃತಿಕ, ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ಬಿ.ಸಿ.ರೋಡಿನ ಹಳೇ ರಂಗಮಂದಿರ ಕಟ್ಟಡವನ್ನು 2021ರಲ್ಲಿ ಕೆಡಹಲಾಗಿತ್ತು. 1983ರಲ್ಲಿ ಸಾರ್ವಜನಿಕ ರಂಗಮಂದಿರವನ್ನು ನಿರ್ಮಿಸಲಾಗಿತ್ತು. ಅಂದಿನ ತಹಸೀಲ್ದಾರ್ ಆರ್.ಕೆ.ರಾಜು ಅವರ ಮುತುವರ್ಜಿಯಿಂದ ರಂಗಮಂದಿರವನ್ನು ಸಾರ್ವಜನಿಕರ ಸಹಕಾರದೊಂದಿಗೆ ನಿರ್ಮಿಸಲಾಗಿತ್ತು. ಅಂದಿನಿಂದ ಅಂದರೆ 1983ರಿಂದ 2017ರವರೆಗೆ ಇಲ್ಲಿ ನಿರಂತರವಾಗಿ ಚಟುವಟಿಕೆಗಳು ನಡೆಯುತ್ತಿದ್ದವು. ಬಿ.ಸಿ.ರೋಡಿನಲ್ಲಿ ನಾಟಕ ಪ್ರದರ್ಶನಕ್ಕಷ್ಟೇ ಅಲ್ಲ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕರಾವಳಿ ಉತ್ಸವ, ರಸಮಂಜರಿ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ಸಂಘ ಸಂಸ್ಥೆಗಳ ವಾರ್ಷಿಕೋತ್ಸವಕ್ಕೂ ರಂಗಮಂದಿರ ವೇದಿಕೆಯಾಗಿತ್ತು. ಮಿನಿ ವಿಧಾನಸೌಧ ನಿರ್ಮಾಣಗೊಂಡ ನಂತರವೂ ಶಿಥಿಲವಾಗಿ, ನಿರ್ವಹಣೆ ಇಲ್ಲದ ಕಟ್ಟಡದಲ್ಲಿ ಜನಸ್ನೇಹಿ ಕೇಂದ್ರದ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಅದು ಮಿನಿ ವಿಧಾನಸೌಧಕ್ಕೆ ಶಿಫ್ಟ್ ಆದ ಮೇಲೆ ಇಲ್ಲಿ ಚಟುವಟಿಕೆ ಸ್ತಬ್ದಗೊಂಡಿತು.

ಯಾವುದೇ ಊರಿನ ಜೀವಂತಿಗೆ ಆ ಊರಿನಲ್ಲಿ ನಡೆಯುವ ಸಾಂಸ್ಕೃತಿಕ- ಸಾಹಿತ್ಯಕ ಚಟುವಟಿಕೆಗಳಿಂದ ಗೋಚರಿಸಲ್ಪಡುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಇಂತಹ  ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ. ಆದಾಗ್ಯೂ ತಾಲೂಕು ಕೇಂದ್ರದಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸಲು ವೇದಿಕೆಯೊಂದರ ಕೊರತೆ ಎದ್ದು ಕಾಣುತ್ತಿದೆ. ಬಸ್, ರೈಲ್ವೆ ನಿಲ್ದಾಣಗಳು, ರಸ್ತೆಗಳು, ಇತರೆ ಕಟ್ಟಡಗಳು ಇಲ್ಲಿವೆ.  ನಾಟಕ, ಯಕ್ಷಗಾನ ದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ರಂಗಮಂದಿರವೊಂದರ ಅಗತ್ಯವಿದೆ. ಪಂಜೆ ಮಂಗೇಶರಾಯರು, ಬಿ. ವಿ. ಕಾರಂತರಂತಹ ಮೇರು ಸಾಹಿತಿ, ರಂಗಕರ್ಮಿಗಳ ತವರು ನೆಲದಲ್ಲಿ ರಂಗ ಚಟುವಟಿಕೆಗಳಿಗೆ ವೇದಿಕೆಯೊಂದರ ನಿರ್ಮಾಣ ಬಂಟ್ವಾಳದ ಬೇಡಿಕೆಯಾಗಿದೆ.ದಾಮೋದರ ರಾಮಕುಂಜ, ಅಧ್ಯಕ್ಷರು, ಅಭಿರುಚಿ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಜೋಡುಮಾರ್ಗ.

ಬಂಟ್ವಾಳ ತಾಲೂಕಿನ ಪ್ರಮುಖ ಕಲಾವಿದರು ಬೆಳೆದುಬರಲು ಕಾರಣವಾದದ್ದು ಬಿ.ಸಿ.ರೋಡಿನ ಕೇಂದ್ರಸ್ಥಾನದಲ್ಲಿದ್ದ ರಂಗಮಂದಿರ. ಸಾಕಷ್ಟು ಹವ್ಯಾಸಿಗಳಿಗೂ ಇದು ವೇದಿಕೆಯೊದಗಿಸಿತ್ತು. ತಾಲೂಕಿಗೊಂದು ಸುಸಜ್ಜಿತ ವೇದಿಕೆ ಅಗತ್ಯವಿದೆ.ಎಚ್.ಕೆ. ನಯನಾಡು, ರಂಗಭೂಮಿ ಕಲಾವಿದರು.

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "ಬಿ.ವಿ.ಕಾರಂತ ಹುಟ್ಟಿದ ತಾಲೂಕಲ್ಲಿ ಸುಸಜ್ಜಿತ ರಂಗಮಂದಿರವೇ ಇಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*