
ದಟ್ಟವಾದ ಪೊದೆಗಳು, ಒಣ ಹುಲ್ಲುಗಳ ಬಣವೆ, ಯಾರೋ ತಂದೆಸೆದ ಕಸ ಕಡ್ಡಿ, ಹಬ್ಬುವ ಕಿಚ್ಚು!!
ಬಿ.ಸಿ.ರೋಡ್ ರೈಲ್ವೆ ನಿಲ್ದಾಣದಿಂದ ಮುಂದೆ ರೈಲ್ವೆ ಸೇತುವೆಯ ಬಳಿ ಇಂಥ ಸ್ಥಿತಿ ಪ್ರತಿ ವರ್ಷವೂ ಇರುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಬೆಂಕಿ ಅನಾಹುತ ಇಲ್ಲಿ ಸಂಭವಿಸಿದೆ. ಪ್ರತಿ ಬಾರಿಯೂ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಿದೆ. ಸೋಮವಾರ ಇಲ್ಲಿಗೆ ಸಮೀಪ ಗೂಡಿನಬಳಿಯ ಬಳಕ ಎಂಬಲ್ಲಿ ಮನೆಯೊಂದರಲ್ಲಿ ಅಗ್ನಿ ಆಕಸ್ಮಿಕದಂಥ ದುರಂತ ಸಂಭವಿಸಿದೆ. ಆ ಭಾಗಕ್ಕೆ ಹೋಗಲು ಅಗ್ನಿಶಾಮಕ ವಾಹನಕ್ಕೆ ಮಾತ್ರ ಸಾಧ್ಯವಾಗಲಿಲ್ಲ. ಕಾರಣ ಅಗಲಕಿರಿದಾದ ರಸ್ತೆ. ಇಲ್ಲಿ ಸಾಗಲು ರಸ್ತೆಯೇ ಸರಿ ಇಲ್ಲ. ರೈಲ್ವೆ ಜಾಗವಾದ ಕಾರಣ ರಸ್ತೆ ನಿರ್ಮಿಸುವುದೂ ಸುಲಭದ ಮಾತಲ್ಲ.
ಬಿ.ಸಿ.ರೋಡಿನ ರೈಲ್ವೆ ನಿಲ್ದಾಣದ ಒಂದು ಪಾರ್ಶ್ವದಲ್ಲಿ ಕೈಕುಂಜೆ ಮತ್ತೊಂದು ಭಾಗದಲ್ಲಿ ಗೂಡಿನಬಳಿ ಪ್ರದೇಶಗಳಿವೆ. ರೈಲ್ವೆ ಸೇತುವೆಯ ಅಡಿಯಲ್ಲಿ ಹಿಂದು ರುದ್ರಭೂಮಿ ಹಾಗೂ ಪ್ರಾರ್ಥನಾ ಕೇಂದ್ರವೊಂದಿದೆ. ಅಗ್ನಿ ಆಕಸ್ಮಿಕ ಸಂಭವಿಸಿದ ಪ್ರದೇಶ ಗೂಡಿನಬಳಿ ಭಾಗದಲ್ಲಾದರೂ ಇಲ್ಲಿಗೆ ತಲುಪಲು ರೈಲ್ವೆ ನಿಲ್ದಾಣದ ಕ್ವಾರ್ಟಸ್ ಬದಿಯಿಂದ ಸಾಗಲು ಘನ ವಾಹನಕ್ಕೆ ಸಾಧ್ಯವಿಲ್ಲ. ಸಣ್ಣ ವಾಹನಗಳಷ್ಟೇ ಬರಲು ಸಾಧ್ಯ. ಹೀಗಾಗಿ ಕೈಕುಂಜೆಯ ಭಾಗದಿಂದ ರೈಲ್ವೆ ಸೇತುವೆಯ ಅಡಿಯಲ್ಲಿರುವ ಮಾರ್ಗದಲ್ಲಿ ಸಾಗಿ ಬಳಕ ಪ್ರದೇಶಕ್ಕೆ ಬರಬೇಕಾಗಿದ್ದು, ಇಲ್ಲಿ ಕೆಲವೊಂದು ಭಾಗದಲ್ಲಿ ರಸ್ತೆ ತೀರಾ ಅಗಲಕಿರಿದಾಗಿದೆ.
ಸೋಮವಾರ ಮನೆಯೊಂದರ ಬೆಂಕಿ ನಂದಿಸಲೆಂದು ಬಂದ ಅಗ್ನಿಶಾಮಕ ವಾಹನ ಕುಸಿದಿದೆ. ಇದರಿಂದ ಸಕಾಲದಲ್ಲಿ ತಲುಪಲು ಸಾಧ್ಯವಾಗಲಿಲ್ಲ.
ರಸ್ತೆ ಅಗಲಗೊಳ್ಳಬೇಕು ಎಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ಮಾಡಲಾಗುತ್ತಿದ್ದು, ರೈಲ್ವೆ ಇಲಾಖೆಯ ಸಹಯೋಗವೂ ಬೇಕಾಗುತ್ತದೆ. ನೇತ್ರಾವತಿಯ ಇನ್ನೊಂದು ಭಾಗದಲ್ಲಿ ರೈಲ್ವೆ ಸೇತುವೆಯಡಿ ಅಗಲವಾದ ರಸ್ತೆ ಇದ್ದು, ಇದೇ ಮಾದರಿಯಲ್ಲಿ ಇಲ್ಲೂ ರಸ್ತೆ ಅಗಲಗೊಳಿಸಿದರೆ, ಆಪತ್ಕಾಲದಲ್ಲಿ ನೆರವಾಗಬಹುದು.
ಸ್ಥಳೀಯರನ್ನು ಒಳಗೊಂಡ ಸಮಿತಿ ರೈಲ್ವೆ ನಿಲ್ದಾಣದಲ್ಲಿರಲಿ
ಕೈಕುಂಜೆ ಭಾಗದಲ್ಲಿ ರಸ್ತೆ ಅಗಲವಾಗದೆ ಇಲ್ಲೇನಾದರೂ ಅಗ್ನಿ ಅನಾಹುತ ಸಂಭವಿಸಿದರೆ, ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಣ್ಣಪುಟ್ಟ ವಿಚಾರಕ್ಕೂ ಪರ್ಮಿಶನ್ ಗೆ ತಕರಾರು ತೆಗೆಯುವ ರೈಲ್ವೆ ಇಲಾಖೆಯ ಜಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ, ಇಲಾಖೆಯನ್ನು ಸ್ಥಳೀಯರು ಹೇಗೆ ಸಂಪರ್ಕಿಸಬೇಕು? ಕನ್ನಡ ಬಲ್ಲ ಸ್ಟೇಶನ್ ಮಾಸ್ಟರ್ ಕೂಡ ಇರುವುದಿಲ್ಲ, ಏನಾದರೂ ಆದರೆ ಸ್ಥಳೀಯರು ಬರಬೇಕು, ಉಳಿದದ್ದಕ್ಕೆಲ್ಲಾ ಅವರು ಲೆಕ್ಕಕ್ಕಿಲ್ಲದಂತೆ ಮಾಡಿದರೆ ಹೇಗೆ? ಪ್ರತಿ ರೈಲ್ವೆ ನಿಲ್ದಾಣದಲ್ಲೂ ಸ್ಥಳೀಯರ ಸಮಿತಿಯನ್ನು ಸಕ್ರಿಯಗೊಳಿಸಬೇಕು. ಜನಪ್ರತಿನಿಧಿಗಳು ತಮ್ಮ ಇರುವಿಕೆಯನ್ನು ತೋರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Be the first to comment on "ಬೆಂಕಿ ಬಿದ್ದರೆ ತುರ್ತು ಸಾಗಾಟಕ್ಕೂ ದಾರಿ ಇಲ್ಲ | ರೈಲ್ವೆ ಜಾಗದಲ್ಲಿ ಆವರಿಸಿದ ದಟ್ಟ ಪೊದೆ | ಅಗ್ನಿಶಾಮಕ ವಾಹನ ಸಾಗಲು ಅಗಲವಾದ ರಸ್ತೆಯ ಕೊರತೆ"