ಮೊಗರ್ನಾಡು ದೇವಮಾತೆ ಚರ್ಚ್‌ನಲ್ಲಿ ಫೆಬ್ರವರಿ 1ರ ಭಾನುವಾರ ‘ಮಕ್ಕಳ ವರ್ಷ–2026’ ಕಾರ್ಯಕ್ರಮಕ್ಕೆ ಭಕ್ತಿಭಾವ ಹಾಗೂ ಸಂಭ್ರಮದೊಂದಿಗೆ ಅದ್ಧೂರಿ ಚಾಲನೆ ನೀಡಲಾಯಿತು. ಮಕ್ಕಳ ಸಮಗ್ರ ಅಭಿವೃದ್ಧಿ ಹಾಗೂ ಉಜ್ವಲ ಭವಿಷ್ಯದ ದೃಷ್ಟಿಕೋನವನ್ನು ಕೇಂದ್ರವಾಗಿಟ್ಟುಕೊಂಡ ಈ ಕಾರ್ಯಕ್ರಮವು ಪವಿತ್ರ ಬಲಿಪೂಜೆ, ಸಾಂಕೇತಿಕ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು.

ಕಾರ್ಯಕ್ರಮವು ಮಕ್ಕಳ ಹಾಗೂ ಪೋಷಕರ ಮೆರವಣಿಗೆಯೊಂದಿಗೆ ಆರಂಭಗೊಂಡ ವಿಶೇಷ ಪವಿತ್ರ ಬಲಿಪೂಜೆಯ ಮೂಲಕ ಆರಂಭವಾಯಿತು. ವಂದನೀಯ ಫಾದರ್ ಆ್ಯಂಟನಿ ಕ್ಲಾನಿ ಡಿಸೋಜ ಅವರು ಮುಖ್ಯ ಅರ್ಚಕರಾಗಿ ಬಲಿಪೂಜೆ ನೆರವೇರಿಸಿದರು. ತಮ್ಮ ಪ್ರವಚನದಲ್ಲಿ ಅವರು ಮಕ್ಕಳಲ್ಲಿ ಅಡಗಿರುವ ಪವಿತ್ರತೆ, ನಮ್ರತೆ ಮತ್ತು ಶಾಂತಿಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ವಂ. ಫಾ. ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವಮಾತಾ ಶಾಲೆಯ ಪ್ರಾಂಶುಪಾಲ ವಂ. ಫಾ. ನವೀನ್ ಪ್ರಕಾಶ್ ಪಿಂಟೊ, ವಂ. ಫಾ. ಆಸ್ಟಿನ್ ಫೆರ್ನಾಂಡಿಸ್ ಹಾಗೂ ಚರ್ಚಿನ ಪ್ರಧಾನ ಸೇವಕರಾದ ಅವಿಲ್ ಸಾಂತ್ಮಾಯೋರ್ ಉಪಸ್ಥಿತರಿದ್ದರು.
ಬಲಿಪೂಜೆಯ ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಯೊಂದು ತರಗತಿಯನ್ನು ಪ್ರತಿನಿಧಿಸುವ ಮಕ್ಕಳು ಬಣ್ಣಬಣ್ಣದ ಹೀಲಿಯಂ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ‘ಮಕ್ಕಳ ವರ್ಷ–2026’ಕ್ಕೆ ಸಾಂಕೇತಿಕ ಚಾಲನೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಚಿರಿ’ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಂಡಿತು. ವಂ. ಡಾ. ಆಲ್ವಿನ್ ಸೆರಾವೊ ಅವರು ರಚಿಸಿದ ಈ ನಾಟಕವನ್ನು, ನೀನಾಸಂನ ಕ್ರಿಸ್ಟೋಫರ್ ಡಿಸೋಜ ಅವರ ನಿರ್ದೇಶನದಲ್ಲಿ ಮಂಗಳೂರಿನ ‘ಅಸ್ತಿತ್ವ (ರಿ.) ತಂಡದ ಕಲಾವಿದರು ಅಭಿನಯಿಸಿದರು. ಕಾರ್ಯಕ್ರಮವನ್ನು ಕ್ರೈಸ್ತ ಶಿಕ್ಷಣ ಆಯೋಗ ಸಂಚಾಲಕಿ ಅನಿತಾ ಡಿಸೋಜ, ಕುಟುಂಬ ಆಯೋಗ ಸಂಚಾಲಕ ಜೋಕಿಮ್ ಪಸನ್ನ ಹಾಗೂ ಶಿಕ್ಷಣ ಆಯೋಗ ಸಂಚಾಲಕ ಜೋನ್ ಫುರ್ಟಾಡೊ ಸಹಯೋಗದಲ್ಲಿ ಆಯೋಜಿಸಲಾಯಿತು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನೋಯೆಲ್ ಲೋಬೊ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ ಹಾಗೂ ಆಯೋಗಗಳ ಸಂಯೋಜಕಿ ಸೀಮಾ ಮರಿಯಾ ಡಿಕುನ್ಹಾ ಉಪಸ್ಥಿತರಿದ್ದರು.ಮಿಷನ್ ಕೋರ್ ಕನ್ವೀನರ್‌ಗಳಾದ ನವೀನ್ ಡಿಕುನ್ಹಾ, ಅನಿಲ್ ಡಿಸೋಜ, ರೋಶನ್ ಬರ್ಬೋಜಾ ಮತ್ತು ರಾಯ್ಸ್ ಮೊಂತೆರೊ ಹಾಜರಿದ್ದರು


Be the first to comment on "ಮೊಗರ್ನಾಡು ಚರ್ಚ್‌ನಲ್ಲಿ ‘ಮಕ್ಕಳ ವರ್ಷ–2026’ಕ್ಕೆ ಅದ್ಧೂರಿ ಚಾಲನೆ| ಪವಿತ್ರ ಬಲಿಪೂಜೆ, ಬಲೂನ್ ಹಾರಾಟ ಮತ್ತು ‘ಚಿರಿ’ ಕೊಂಕಣಿ ನಾಟಕದೊಂದಿಗೆ ಸಂಭ್ರಮ"