
ಮಾತೃಭಾಷೆ ಉಳಿವಿಗೆ ಎಲ್ಲರೂ ಆದ್ಯತೆ ನೀಡಿ ಶ್ರಮಿಸಬೇಕು. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಆಗುವ ನಿಟ್ಟಿನಲ್ಲಿ ಠರಾವು ಮಂಡಿಸಿ ಸರಕಾರಕ್ಕೆ ಸಮ್ಮೇಳನದ ಮೂಲಕ ಕಳುಹಿಸಲಾಗುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಮಂಗಳವಾರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನದ ಆತ್ರೇಯ ಮಂಟಪದಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಸಂದೇಶ ನೀಡಿದರು. ದೇಶಪ್ರೇಮದ ಕಿಚ್ಚು ಹಬ್ಬಿಸಿದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು. ಈ ಸಂದರ್ಭ ಒಡಿಯೂರು ಶ್ರೀಗಳು ತುಳು ಲಿಪಿಯಲ್ಲಿ ಬರೆದ ವಂದೇ ಮಾತರಂ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು.
ಸಮ್ಮೇಳನಾಧ್ಯಕ್ಷ ಕದ್ರಿ ನವನೀತ ಶೆಟ್ಟಿ ಮಾತನಾಡಿ, ದಾಸ್ಯದ ಸಂಕೋಲೆಯಿಂದ ಹೊರಬರಲು ಬಂಕಿಮಚಂದ್ರ ಚಟರ್ಜಿ ವಂದೇ ಮಾತರಂ ಗೀತೆ ರಚಿಸಿದ ಹಿನ್ನೆಲೆ ವಿವರಿಸಿ, ದೇಸೀಯತೆಗೆ ಒತ್ತು ನೀಡಿದಾಗ ಭಾಷೆ ಭದ್ರವಾಗುತ್ತದೆ. ತುಳು ಭಾಷೆ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದರು.
ಮುಖ್ಯ ಅತಿಥಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ ತುಳು ಭಾಷೆಗೆ ಸ್ಥಾನಮಾನ ದೊರಕಲು ಅಕಾಡೆಮಿ ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸಿದರು.
ಠರಾವು ಮಂಡನೆ:
ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಪ್ರಧಾನಮಂತ್ರಿ ಹಾಗೂ ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡುವ ಠರಾವನ್ನು ಸಮ್ಮೇಳನದ ಪ್ರಧಾನ ಸಂಚಾಲಕ ಡಾ. ವಸಂತಕುಮಾರ ಪೆರ್ಲ ಮಂಡಿಸಿದರು. ಅದನ್ನು ಒಕ್ಕೊರಳಿನಿಂದ ಸಭೆ ಅಂಗೀಕರಿಸಿತು.
ಅಲ್ಟ್ರಾಟೆಕ್ ಸಿಮೆಂಟ್ ನ ಹಿರಿಯ ಪ್ರಬಂಧಕ ಸದಾನಂದ ಸುಲಾಯ, ರಥೋತ್ಸವ ಸಮಿತಿ ಅಧ್ಯಕ್ಷ ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡ, ಉಪಾಧ್ಯಕ್ಷ ವಾಮಯ್ಯ ಬಿ. ಶೆಟ್ಟಿ ಉಪಸ್ಥಿತರಿದ್ದರು. ನಿತ್ಯಾ ಎಸ್. ರೈ ಪ್ರಾರ್ಥಿಸಿದರು. ರಥೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಮಾತೇಶ್ ಭಂಡಾರಿ ವಂದಿಸಿದರು. ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನದ ಮೊದಲು ವಂದೇ ಮಾತರಂ ಗೀತೆಗೆ ಸುಳ್ಯದ ನೂಪುರ ಕಲಾ ತಂಡದಿಂದ ನೃತ್ಯ, ಯದ್ವಿ ರೈ ಅವರಿಂದ ದೇವಿ ಸ್ತುತಿ ನೃತ್ಯ, ಉದ್ಘಾಟನಾ ಸಮಾರಂಭದ ಬಳಿಕ ಪೇಂಟೆದ ಪೊರ್ಲು ಹಳ್ಳಿದ ತಿರ್ಲ್ ವಿಚಾರಗೋಷ್ಠಿಯಲ್ಲಿ ಶ್ರೀಕಾಂತ ಶೆಟ್ಟಿ, ವಿಜೇತ್ ಶೆಟ್ಟಿ ಮಂಜನಾಡಿ ಅವರಿಂದ ವಿಚಾರ ಮಂಡನೆ, ಬಳಿಕ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ದೇಶಸೇವೆ ಸಲ್ಲಿಸಿದ ಮೂವತ್ತಕ್ಕೂ ಅಧಿಕ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.


Be the first to comment on "ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು: ಒಡಿಯೂರು ಶ್ರೀಗಳ ನೇತೃತ್ವದಲ್ಲಿ ಠರಾವು ಮಂಡನೆ | ವಂದೇ ಮಾತರಂ 150ರ ನೆನಪಿಗೆ ನಡೆದ ಸಮ್ಮೇಳನ"