
ಬಂಟ್ವಾಳ: ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು. ಉದ್ಯಮಿ ಸುಧಾಕರ ಸಾಲಿಯಾನ್ ಮುಖ್ಯಅತಿಥಿಗಳಾಗಿ ಆಗಮಿಸಿ, ಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿ, ಗಣರಾಜ್ಯೋತ್ಸವದ ಮಹತ್ವ ಅರಿತು ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ಸಲಹೆ ನೀಡಿ ಶಾಲಾಭಿವೃದ್ಧಿಗೆ 5 ಸಾವಿರ ರೂ ಮೊತ್ತದ ಚೆಕ್ ಅನ್ನು ದೇಣಿಗೆಯಾಗಿ ನೀಡಿದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಿಶೋರ್ ಕುಲಾಲ್ ವಹಿಸಿ ಶಾಲಾ ವಾರ್ಷಿಕೋತ್ಸವ ಮತ್ತು ಶಾಲಾಭಿವೃದ್ಧಿಗೆ ಕೈಗೊಂಡಿರುವ ನನ್ನ ಶಾಲೆ, ನನ್ನ ಕೊಡುಗೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಯುಪಿಐ ಕ್ಯೂಆರ್ ಕೋಡ್ ಅನ್ನು ಬಿಡುಗಡೆಗೊಳಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಹರೀಶ್ ಮಾಂಬಾಡಿ 1 ಸಾವಿರ ರೂಗಳನ್ನು ಯುಪಿಐ ಪೇ ಮೂಲಕ ನೀಡುವ ಮೂಲಕ ದೇಣಿಗೆಗೆ ಚಾಲನೆ ನೀಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಕಾಮಾಜೆ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಿನೋದಾ, ಎಸ್.ಡಿ.ಎಂ.ಸಿ. ಸದಸ್ಯರಾದ ದೇವದಾಸ್, ರಮ್ಯಾ ಉಪಸ್ಥಿತರಿದ್ದರು.
ಶಾಲಾ ಉಪನಾಯಕ ಸಮರ್ಥ್ ಧ್ವಜಾರೋಹಣ ಜವಾಬ್ದಾರಿ ನಿರ್ವಹಿಸಿದರು, 5ನೇ ತರಗತಿ ವಿದ್ಯಾರ್ಥಿನಿ ವಿಭಾ ಇಂಗ್ಲಿಷ್ ನಲ್ಲಿ ಮತ್ತು 7ನೇ ತರಗತಿ ಶಿವರಾಜ್ ಕನ್ನಡದಲ್ಲಿ ಗಣರಾಜ್ಯೋತ್ಸವ ಕುರಿತು ಭಾಷಣ ಮಾಡಿದರು. ಮುಖ್ಯ ಶಿಕ್ಷಕಿ ಲಕ್ಶ್ಮೀ ಸ್ವಾಗತಿಸಿದರು, ಸಹ ಶಿಕ್ಷಕಿ ಐರಿನ್ ವಂದನಾರ್ಪಣೆ ಮಾಡಿದರು, ಕಂಪ್ಯೂಟರ್ ಶಿಕ್ಷಕ ಶಿವಮೂರ್ತಿ ನಿರೂಪಣೆ ನಿರ್ವಹಿಸಿದರು. ಶಿಕ್ಷಕ ವೃಂದ ಸಹಕಾರ ನೀಡಿದರು.


Be the first to comment on "ಅಜ್ಜಿಬೆಟ್ಟು ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲೆ: ಗಣರಾಜ್ಯೋತ್ಸವ"