
ಬಿ.ಸಿ.ರೋಡ್ ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಮೆಲ್ಕಾರ್ ಮತ್ತು ಪಾಣೆಮಂಗಳೂರಿನಲ್ಲಿ ನೇರವಾಗಿ ಸಾಗಲು ಮೇಲಿನಿಂದ ಎಲೆವೇಟೆಡ್ ರಸ್ತೆ ಹಾಗೂ ಕೆಳಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಗೊಂಡಿದೆ. ನೇರವಾಗಿ ಹೋಗುವವರು ಸರ್ವೀಸ್ ರಸ್ತೆಯಲ್ಲಿ ಇಳಿಯುವುದಿಲ್ಲ. ಊರಿನವರಿಗೆ ಸರ್ವೀಸ್ ರಸ್ತೆಯನ್ನು ಹೊರತುಪಡಿಸಿ ಬೇರೆ ದಾರಿಯೇ ಇಲ್ಲ. ದೂರದೂರಿಗೆ ಹೋಗುವವರಿಗೆ ಬಸ್ಸಿಗಾಗಿ ಕಾಯುವುದೇ ದೊಡ್ಡ ಸಮಸ್ಯೆ.

ಬಿ.ಸಿ.ರೋಡ್ ನಿಂದ ಪುತ್ತೂರಿಗೆ ತೆರಳುವ ಬಸ್ಸುಗಳು ಪಾಣೆಮಂಗಳೂರು ಮತ್ತು ಮೆಲ್ಕಾರ್ ನ ಪ್ರಯಾಣಿಕರನ್ನು ಹತ್ತಿಸಬೇಕು ಎಂದಾದರೆ, ಎಲವೇಟೆಡ್ ರಸ್ತೆಯ ಬದಿಯ ಸರ್ವೀಸ್ ರೋಡ್ ನಲ್ಲೇ ಸಾಗಬೇಕು. ಅಂಡರ್ ಪಾಸ್ ಬಳಿಯ ಎಡ ಹಾಗೂ ಬಲಭಾಗದಲ್ಲಿರುವ ಜಾಗವೇ ಬಸ್ ಗಾಗಿ ಕಾಯುವ ಸ್ಥಳ. ಬಸ್ಸುಗಳಿಗೂ ಪ್ರಯಾಣಿಕರಿಗೂ ನಿಲ್ಲಲು ಜಾಗ ಒಂದೇ..ಅದು ಸರ್ವೀಸ್ ರಸ್ತೆ.
ನರಿಕೊಂಬು ತಿರುವು ಅಪಾಯಕಾರಿ:
ಬಿ.ಸಿ.ರೋಡ್ ನಿಂದ ಸರ್ವೀಸ್ ರಸ್ತೆ ಮೂಲಕ ನರಿಕೊಂಬು ಕಡೆಗೆ (ಎಡಭಾಗಕ್ಕೆ) ತಿರುಗುವ ಜಾಗ ಅಪಾಯಕಾರಿಯೂ ಹೌದು. ಇಲ್ಲಿ ಪ್ರಯಾಣಿಕರು ನಿಲ್ಲಲು ಸರಿಯಾದ ಜಾಗವೂ ಇಲ್ಲ. ಅಂಡರ್ ಪಾಸ್ ಆಟೊ ನಿಲ್ಲಲು ಬಳಕೆಯಾದರೆ, ಪ್ರಯಾಣಿಕರೂ ಮಳೆ ಬಂದರೆ ಅಲ್ಲೇ ನಿಲ್ಲಬೇಕು. ಮಳೆಗಾಲದಲ್ಲಿ ನೀರು ನಿಂತರೆ ಪರಿಸ್ಥಿತಿ ಅಯೋಮಯ. ಪುತ್ತೂರು, ಉಪ್ಪಿನಂಗಡಿ, ಮೆಲ್ಕಾರ್ ಕಡೆ ತೆರಳುವ ಪ್ರಯಾಣಿಕರು ನರಿಕೊಂಬು ತಿರುವಿನ ಬಳಿ ನಿಲ್ಲುತ್ತಾರೆ. ಕಲ್ಲುರ್ಟಿ ಸನ್ನಿಧಿ ಬಳಿ ಮಂಗಳೂರಿಗೆ ತೆರಳುವ ಪ್ರಯಾಣಿಕರು ನಿಲ್ಲುತ್ತಾರೆ. ಶಾಲೆ, ಕಾಲೇಜುಗಳಿದ್ದಾಗ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಮೆಲ್ಕಾರ್ ನಲ್ಲಿ ತಂಗುದಾಣವೆಲ್ಲಿ
ಮೆಲ್ಕಾರ್ ನಲ್ಲಿ ಮುಡಿಪು ಕಡೆಗೆ ತೆರಳುವ ಬಸ್ಸುಗಳು ಎಂದಿನಂತೆಯೇ ರಸ್ತೆಯ ಆರಂಭದಲ್ಲೇ ನಿಲ್ಲುತ್ತವೆ. ಅಲ್ಲೇ ಅಂಗಡಿ ಬದಿಯ ಫುಟ್ ಪಾತ್ ನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯಬೇಕು. ಮಂಗಳೂರಿಗೆ ತೆರಳುವ ಪ್ರಯಾಣಿಕರು ಹಿಂದಿನಂತೆಯೇ ಸರ್ವೀಸ್ ರಸ್ತೆ ಬಳಿ ಫುಟ್ ಪಾತ್ ನಲ್ಲಿ ನಿಲ್ಲಬೇಕು. ಪುತ್ತೂರಿಗೆ ತೆರಳುವ ಪ್ರಯಾಣಿಕರು ನಿಲ್ಲಲು ತಂಗುದಾಣವೊಂದು ಹೆಸರಿಗಷ್ಟೇ ಇದೆ. ಎಲ್ಲೂ ಸಮರ್ಪಕ ಬಸ್ ನಿಲುಗಡೆಯಾಗಲೀ, ಪ್ರಯಾಣಿಕರಿಗೆ ಸುರಕ್ಷಿತ ವ್ಯವಸ್ಥೆಯಾಗಲೀ ಇಲ್ಲ.
ಮೆಲ್ಕಾರ್ ನಲ್ಲಿ ಬಸ್ ಪ್ರಯಾಣಿಕರು ಪ್ರತಿನಿತ್ಯ ಸಮಸ್ಯೆ ಅನುಭವಿಸಬೇಕಾಗುತ್ತದೆ. ಕಚೇರಿಗಳಿಗೆ ತೆರಳುವ ಸಂದರ್ಭ ಬಸ್ಸಿಗೆ ಕಾಯುವುದು ಅತ್ಯಂತ ಕಷ್ಟಕರವಾಗಿದೆ ಎನ್ನುತ್ತಾರೆ ಪ್ರಯಾಣಿಕರಾದ ಗಣೇಶ್
ನಾನು ಶಾಲೆಗೆ ಹೋಗುವಾಗಲೂ ಬಿಸಿಲು, ಮಳೆಗೆ ರಸ್ತೆ ಬದಿಯಲ್ಲೇ ಬಸ್ಸಿಗೆ ಕಾಯುತ್ತಿದ್ದೆ. ಈಗ ಕಚೇರಿಗೆ ತೆರಳುವಾಗಲೂ ಅಲ್ಲೇ ಕಾಯುತ್ತಿದ್ದೇನೆ, ಫ್ಲೈಓವರ್ ಬಂದು, ರಸ್ತೆ ಅಭಿವೃದ್ಧಿಯಾದರೂ ನಮಗೊಂದು ಸಮರ್ಪಕ ತಂಗುದಾಣ ಮಾಡಿಲ್ಲ ಎಂದು ವ್ಯಥೆಪಡುತ್ತಾರೆ ಉದ್ಯೋಗಿ ಅಭಿಷೇಕ್.


Be the first to comment on "ಮೆಲ್ಕಾರ್, ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲ"