
ಬಂಟ್ವಾಳ ತಾಲೂಕಿನ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಪರ್ಕ ರಸ್ತೆ, ವಿವಿಧ ಸೌಕರ್ಯಗಳ ಕಾಮಗಾರಿಗೆ ಚಾಲನೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಜ.11ರಂದು ಪದ್ಯಾಣ ದೇವಸ್ಥಾನದಲ್ಲಿ ನಡೆಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಮಾತನಾಡಿದ ಎಡನೀರು ಶ್ರೀಗಳು, ಪದ್ಯಾಣದಲ್ಲಿ ಶ್ರೀಮಂತವಾದ ಸಾಂಸ್ಕೃತಿಕ ನೆಲೆಗಟ್ಟು ಇದೆ. ದೇವಸ್ಥಾನಗಳ ಅಭಿವೃದ್ಧಿಗೆ ಊರವರ ಸಹಕಾರ ದೊರಕಿರುವುದು ಅಭಿನಂದನೀಯ. ಆಮಂತ್ರಣ ಬಿಡುಗಡೆಯಾದ ಮೇಲೆ ಭಕ್ತಾದಿಗಳಿಗೆ ಹೆಚ್ಚಿನ ಜವಾಬ್ದಾರಿ ದೊರಕುತ್ತದೆ. ಬ್ರಹ್ಮಕಲಶೋತ್ಸವ ನಡೆದ ಬಳಿಕ ಶಾಶ್ವತವಾದ ಆದಾಯ ದೇವಸ್ಥಾನಕ್ಕೆ ಬರುವ ರೀತಿಯಲ್ಲಿ ಮಾಡಬೇಕು. ಎಲ್ಲ ಧಾರ್ಮಿಕ ಕೇಂದ್ರಗಳು ಸ್ವತಂತ್ರ ನಿರ್ವಹಣೆ ಮಾಡುವಂತೆ ಭಕ್ತಾದಿಗಳು ಯೋಚಿಸಿದರೆ ಅರ್ಥಪೂರ್ಣವಾಗುತ್ತದೆ ಎಲ್ಲ ಕಾರ್ಯಕ್ರಮಗಳೂ ನಿರೀಕ್ಷೆಯಂತೆ ವಿಜೃಂಭಣೆಯಿಂದ ಭಗವಂತ ಪ್ರಸನ್ನವಾಗುವಂತೆ ನಡೆಯಲಿ ಬ್ರಹ್ಮಕಲಶೋತ್ಸವ ಜನರ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತದೆ. ಪ್ರತಿಯೊಬ್ಬರ ಪರಿಶ್ರಮವಿದ್ದಾಗ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ದೇವರ ಕಾರ್ಯ ನಿರ್ವಿಘ್ನವಾಗಿ ನಡೆಯಲು ಬೇಕಾದ ಶಾಶ್ವತ ಆದಾಯ ಇರುವಂತೆ ವ್ಯವಸ್ಥೆಯನ್ನು ಮಾಡಬೇಕು ಎಂದರು.
ಒಡಿಯೂರು ಶ್ರೀಗಳು ಮಾತನಾಡಿ, ಶರೀರದ ಭಾರ ಹೆಚ್ಚಾದರೆ ವ್ಯಾಯಾಮ ಮಾಡಬೇಕು. ಮನಸ್ಸಿನ ದುಖ ದುಮ್ಮಾನ ಹೆಚ್ಚಾದರೆ ಧ್ಯಾನ ಮಾಡಬೇಕು. ಎಲ್ಲವನ್ನೂ ಮತ್ತೆ ಗಳಿಸಬಹುದು, ಮತ್ತೆ ಸಿಗುವುದಿಲ್ಲ. ಮಹಾಲಿಂಗೇಶ್ವರ ದೇವರ ದಯೆ ಇದ್ದರೆ ಎಲ್ಲವೂ ಸಾಧ್ಯ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದವರು ಪದ್ಯಾಣದಲ್ಲಿ ಸಲ್ಲುತ್ತದೆ ಎಂದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳು ಮಾತನಾಡಿ ಪದ್ಯಾಣ ದೇವಸ್ಥಾನದ ಪರಂಪರೆಯನ್ನು ವಿವರಿಸಿ, ಬ್ರಹ್ಮಕಲಶೋತ್ಸವಕ್ಕೆ ಶುಭ ಹಾರೈಸಿದರು.
10 ಲಕ್ಷ ರೂ ಕೊಡುಗೆ:
ಈ ಸಂದರ್ಭ ಬೆಂಗಳೂರಿನ ಉದ್ಯಮಿ ಡಾ. ನವೀನ್ ಕುಮಾರ್ ಮತ್ತು ಡಾ. ಶಿಲ್ಪಾ ಸಮನ್ವಿಫೌಂಡೇಶನ್ ನ ಡಾ. ಶಿಲ್ಪಾ ಎಚ್. ನವೀನ್ ದಂಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ 10 ಲಕ್ಷ ರೂಪಾಯಿ ದೇಣಿಗೆಯನ್ನು ಘೋಷಿಸಿದರು.

ಬೆಂಗಳೂರಿನ ಉದ್ಯಮಿ ಡಾ. ನವೀನ್ ಕುಮಾರ್ ಮಾತನಾಡಿ, ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ಆಧ್ಯಾತ್ಮದ ಶಕ್ತಿ ಇದೆ. ನಮ್ಮ ಕುಟುಂಬ ಇನ್ನಷ್ಟು ಪದ್ಯಾಣದೊಂದಿಗೆ ನಿಕಟವಾಗಿ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಲಿದೆ ಎಂದರು
ಈ ಸಂದರ್ಭ ಮಾತನಾಡಿದ ಡಾ.ಶಿಲ್ಪಾ ನವೀನ್, ಸಮಾಜವನ್ನು ಸುಂದರವಾಗಿ ಮಾಡಲು ಸಾಧ್ಯವಾದ ಶಿವನ ಸಾನಿಧ್ಯವಿದು ನಮ್ಮ ಫೌಂಡೇಶನ್ ಮೂಲಕ ಆರೋಗ್ಯ ಶಿಕ್ಷಣಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ, ಜೀರ್ಣೋದ್ಧಾರ ಸಮಿತಿ ಸಮಿತಿ ಗೌರವಾಧ್ಯಕ್ಷ ಪದ್ಯಾಣ ರಘುರಾಮ ಕಾರಂತ, ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ವಕೀಲರಾದ ಎಸ್.ಎಂ.ಭಟ್ ಮಂಗಳೂರು, ದಾನಿಗಳಾದ ಟಿ.ಎಸ್.ಭಟ್ ಮಂಗಳೂರು, ಗುರಿಕಾರರಾದ ಬಾಲಸುಬ್ರಹ್ಮಣ್ಯ ಪದ್ಯಾಣ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಪದ್ಯಾಣ ಗೋವಿಂದ ಭಟ್, ಪ್ರಮುಖರಾದ ಮುಗುಳಿ ತಿರುಮಲೇಶ್ವರ ಭಟ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣಶ್ಯಾಮ ಸ್ವಾಗತಿಸಿದರು. ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪ್ತಿ ಪದ್ಯಾಣ ಮತ್ತು ವೈಭವಿ ಪದ್ಯಾಣ ಪ್ರಾರ್ಥನೆ ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಅವರು ವಂದಿಸಿದರು. ಡಾ. ಗೋವಿಂದ ಪ್ರಸಾದ ಕಜೆ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ ಕುಂಟುಕುಡೇಲು ನವೀನ ತಂತ್ರಿ, ಟಿ.ಎಸ್. ಭಟ್, ಮುಗುಳಿ ತಿರುಮಲೇಶ್ವರ ಭಟ್, ಎಸ್.ಎನ್. ಭಟ್, ಮಾಣಿಪ್ಪಾಡಿ ಕೃಷ್ಣ ಎಂ.ಆರ್, ಶಿವಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವಿನೂತನ ಶೈಲಿ ಬಿಡುಗಡೆ:ಆಮಂತ್ರಣ ಪತ್ರಿಕೆಯನ್ನು ವಿನೂತನ ಶೈಲಿಯಲ್ಲಿ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಬಾಗಿಲಿನ ಪ್ರತಿಕೃತಿ ಮಾಡಿ, ಅದನ್ನು ತೆರೆದು, ಅಲ್ಲಿದ್ದ ಶಿವಲಿಂಗವನ್ನು ಪೂಜಿಸಿ ಆಮಂತ್ರಣ ಬಿಡುಗಡೆಗೊಳಿಸಲಾಯಿತು.


Be the first to comment on "ಪದ್ಯಾಣ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ, ವಿವಿಧ ಕಾಮಗಾರಿಗೆ ಚಾಲನೆ"