ಬಂಟ್ವಾಳ: ಸಮಾಜದ ಎಲ್ಲ ಸ್ತರದ ಜನರು ದಿವ್ಯಾಂಗರ ಸೇವೆಯಲ್ಲಿ ಪಾಲ್ಗೊಳ್ಳುವುದು ಇಂದಿನ ಅಗತ್ಯ. ದಿವ್ಯಾಂಗ ಮಕ್ಕಳಿಗೆ ಮಾಡುವ ಸೇವೆ ಶ್ರೇಷ್ಠವಾದುದು ಎಂದು ಸಹಕಾರ ರತ್ನ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ನಡೆದ ವಿಕಾಸಂ ಸೇವಾ ಫೌಂಡೇಶನ್ ವತಿಯಿಂದ ವಿಕಾಸಂ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರಕ್ತ ಮತ್ತು ಹಣ ಒಂದು ಕಡೆ ಹೆಪ್ಪುಗಟ್ಟಿನಿಂತರೆ ಅದು ಅಪಾಯ. ಹಣ ಸೀಮಿತ ಕೈಗಳಲ್ಲಿ ಮಾತ್ರ ಕ್ರೋಢೀಕರಣಗೊಂಡರೆ ಅದು ಸಮಾಜಕ್ಕೆ ಅಪಾಯ. ಧನವು ದಿವ್ಯಾಂಗರ ಸೇವೆಗೆ ಬಳಕೆಯಾದರೆ ದಿವ್ಯಾಂಗರು ಸಬಲರಾಗುವುದರ ಜೊತೆಗೆ ಸಮಾಜವೂ ಸ್ವಸ್ಥವಾಗುತ್ತದೆ ಎಂದರು. ಈ ಸಂದರ್ಭ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಎಚ್.ಪಿ.ಇಂಡಿಯಾ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಶನ್ ಮುಖ್ಯಸ್ಥರಾದ ದಿಲೀಪ್ ಚಂದ್ರ ಮಾತನಾಡಿ ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆ ಮಾಡುತ್ತಿರುವ ದಿವ್ಯಾಂಗರ ಸೇವೆಯಲ್ಲಿ ಎಚ್ ಪಿ ಸಂಸ್ಥೆ ಸದಾ ಸಹಭಾಗಿಯಾಗಲಿದೆ ಎಂದು ಹೇಳಿದರು. ಎಚ್ ಪಿ ಸಂಸ್ಥೆಯ ಇಂಕ್ಲೂಸಿವ್ ಆಂಡ್ ಬಿಲಾಂಗಿಂಗ್ ಯೋಜನೆಯಡಿಯಲ್ಲಿ ವಿಕಾಸಂ ನಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಶಿಕ್ಷಣದ ಉದ್ದೇಶದಿಂದ ಕಂಪ್ಯೂಟರ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಹೋಟೆಲ್ ವಿವಾಂತ, ಮಂಗಳೂರು ಇಲ್ಲಿನ ಮಾನವಸಂಪನ್ಮೂಲ ಮುಖ್ಯಸ್ಥರಾದ ರೇಖಾ ಸಂಜೀವ್ ಮಾತನಾಡಿ ಖಾಸಗಿ ವಲಯದ ಉದ್ಯೋಗದಾತರೂ ದಿವ್ಯಾಂಗರಿಗೆ ಉದ್ಯೋಗವನ್ನು ಒದಗಿಸಬೇಕು ಎಂದು ಹೇಳಿದರು.

ಉದ್ಯಮಿ ರೋಷನ್ ರೈ ಮಾತನಾಡಿ ನಿಸ್ವಾರ್ಥ ಸೇವೆಯನ್ನು ಮಾಡುವಾಗ ಹಲವು ಅಡೆತಡೆಗಳು ಬರುವುದು ಸಹಜವಾದರೂ,ಒಳ್ಳೆಯ ಉದ್ದೇಶ ಸಾಧನೆಗಾಗಿ ಅದನ್ನೆಲ್ಲಾ ಎದುರಿಸಬೇಕಾಗಿದೆ ಎಂದು ಹೇಳಿದರು.
ಎಚ್ ಪಿ ಸಂಸ್ಥೆಯ ದಿಲೀಪ್ ಚಂದ್ರ, ಪ್ರತಾಪ್ ಕುಮಾರ್ , ವರುಣ್ ಆರ್, ರಚನ್ ಶೆಟ್ಟಿ ಹಾಗೂ ವಿನಯ್ ಕುಮಾರ್ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಂದರ್ಶನ ಕೌಶಲ್ಯ ದ ಬಗ್ಗೆ ತರಬೇತಿ ಕೈಗೊಂಡರು.
ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕ ಧರ್ಮಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ವಿಕಾಸಂ ಸಂಸ್ಥೆಯ ಸಹಸಂಸ್ಥಾಪಕ ಗೋಪಾಲ್ ಗೋವಿಂತೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇನ್ನೋರ್ವ ಸಹ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಅತಿಥಿಗಳನ್ನು ಸ್ವಾಗತಿಸಿದರು. ನವ್ಯಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿಕಾಸಂ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜರಗಿತು


Be the first to comment on "ದಿವ್ಯಾಂಗರ ಸೇವೆಗೆ ಸಮಾಜದ ಎಲ್ಲ ಸ್ತರದ ಜನರ ಪಾಲ್ಗೊಳ್ಳುವಿಕೆ ಅಗತ್ಯ: ಟಿ.ಜಿ.ರಾಜಾರಾಮ ಭಟ್"