ಬೇಸಗೆ ಬಂದ್ರೆ ಬೆಂಕಿ ಅವಘಡ ಜಾಸ್ತಿ: ಆದರೆ ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ, ವಾಹನಗಳೂ ಕಡಿಮೆ

ಬಂಟ್ವಾಳ: ಬೇಸಗೆ ಬಂತಂದ್ರೆ ಕರಾವಳಿಯ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುವುದು ಜಾಸ್ತಿ. ಗುಡ್ಡಕ್ಕೆ ಬೆಂಕಿ ಯಾರೊ ಹಚ್ಚುವುದು ಅಥವಾ ಬೆಂಕಿ ಹಬ್ಬುವುದು ಉಂಟು. ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ತಾಲೂಕಾದ ಬಂಟ್ವಾಳದಲ್ಲಿ ಅಗ್ನಿಶಾಮಕದಳಕ್ಕೆ ಸವಾಲುಗಳು ಜಾಸ್ತಿ. ಇಲ್ಲಿ ಫೈರ್ ಇಂಜಿನ್ ಒಂದೇ ಇದೆ. ಹೆಚ್ಚುವರಿಗೆ ಬೇಡಿಕೆ ಇದೆ. ಸಿಬ್ಬಂದಿ ಕೊರತೆಯೂ ಬಾಧಿಸುತ್ತಿದೆ.

10 ಸಿಬ್ಬಂದಿಗಳ ಕೊರತೆ ಇದೆ. 24 ಸಿಬ್ಬಂದಿಗಳು ಮಂಜೂರಾಗಿದ್ದು, 14 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,  ತುರ್ತು ಸಂದರ್ಭ ಪರದಾಡಬೇಕಾದ ಸ್ಥಿತಿ ಇದೆ

2025ರ ಫೆಬ್ರವರಿ ತಿಂಗಳಲ್ಲೇ ಈ ಇಲಾಖೆ ಸಾಕಷ್ಟು ಶ್ರಮವಹಿಸಿದರೂ ಒಂದೇ ದಿನ ಹಲವು ಕರೆಗಳಿಗೆ ಸ್ಪಂದಿಸುವುದರಲ್ಲೇ ಹೈರಾಣಾಗಿತ್ತು. ಇದೀಗ ಇಂಥ ಕಠಿಣ ಸವಾಲುಗಳನ್ನು ಎದುರಿಸಲು ಅಗ್ನಿಶಾಮಕ ಇಲಾಖೆ ಸಜ್ಜಾಗಿದ್ದು, ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಆಡಳಿತ ಒದಗಿಸುವುದೂ ಅಷ್ಟೇ ತುರ್ತು ಅಗತ್ಯವಾಗಿದೆ.

ಜಾಹೀರಾತು

ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗುತ್ತಿರುವ ವೇಳೆ ಒಂದೇ ವಾಹನವನ್ನು ಎಲ್ಲಿಗೆ ಎಂದು ತೆಗೆದುಕೊಂಡು ಹೋಗುವುದು? ಎಲ್ಲಾ ಕರೆಗಳಿಗೆ ಸ್ಪಂದಿಸುವುದು ಸವಾಲಾಗುತ್ತಿದೆ. ಬಂಟ್ವಾಳ ಅಗ್ನಿಶಾಮಕ ಠಾಣೆಯಲ್ಲಿ ಪ್ರಸ್ತುತ ಒಂದೇ ವಾಹನ ಕಾರ್ಯಾಚರಿಸುತ್ತಿದ್ದು, 2ನೇ ವಾಹನದ ಬೇಡಿಕೆ ಇದ್ದರೂ ಅದು ಪ್ರಸ್ತಾವನೆಯಯಲ್ಲಿಯೇ ಬಾಕಿಯಾಗಿದೆ. ಹೆಚ್ಚುವರಿ ವಾಹನ ಅನಿವಾರ್ಯವಾಗಿದೆ.

ಕರೆಗೆ ಉತ್ತರಿಸುವುದೂ ಸವಾಲು:

ಕೆಲವೊಮ್ಮೆ ಒಂದೇ ಸಮಯದಲ್ಲಿ ಹೆಚ್ಚಿನ ಕಾಡ್ಗಿಚ್ಚಿನ ಕರೆಗಳು ಬರುತ್ತದೆ, ಒಂದು ಘಟನೆಯನ್ನು ಮುಗಿಸಿ ಬರುವುದಕ್ಕೆ ಕನಿಷ್ಠ ನಾಲ್ಕೈದು ಗಂಟೆಯಾದರೂ ಬೇಕಾಗುತ್ತದೆ. ಹೀಗಿರುವಾಗ ಒಂದೇ ಸಮಯಕ್ಕೆ ಹೆಚ್ಚಿನ ಕರೆಗಳು ಬಂದರೆ ಏನ್ನೂ ಮಾಡಲಾಗ ಸ್ಥಿತಿ ನಿರ್ಮಾಣವಾಗುತ್ತದೆ. ಈ ವರ್ಷ ಫೆ. 4ರಂದು ಒಂದೇ ದಿನ ನಾಲ್ಕು ಕರೆ ಬಂದಿದ್ದರೆ, 25ರಂದು ದಿನವಿಡೀ ಕರೆಗಳು. ಮಳೆಗಾಲ ಆರಂಭವಾಗುವವರೆಗೂ ಇದೇ ರೀತಿ ಕರೆಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಬಂಟ್ವಾಳ ಠಾಣೆಯಲ್ಲಿ ಒಂದೇ ಅಗ್ನಿಶಾಮಕ ವಾಹನವಿರುವುದರಿಂದ ಕಳೆದ 2 ವರ್ಷ ಕರೆಗಳು ಕಡಿಮೆ ಇರುವ ಮೂಡಬಿದಿರೆಯಿಂದ ಒಂದು ಗಾಡಿಯನ್ನು ಬೇಸಗೆ ಮುಗಿಯುವವರೆಗೆ ಬಂಟ್ವಾಳಕ್ಕೆ ತರಿಸಿಕೊಳ್ಳಲಾಗಿತ್ತು. ಜತೆಗೆ ಬೆಳ್ತಂಗಡಿ, ಪುತ್ತೂರಿನ ವಾಹನಗಳು ಕೂಡ ಬಂಟ್ವಾಳದ ಗಡಿ ಗ್ರಾಮಗಳ ಅಗ್ನಿ ಅನಾಹುತಗಳ ನಿರ್ವಹಣೆ ಕಾರ್ಯ ಮಾಡಿದ್ದು, ಸುಮಾರು 1 ವಾರಗಳ ಕಾಲ ಮಂಗಳೂರು ಪಾಂಡೇಶ್ವರದ ವಾಹನ ಬಂಟ್ವಾಳದಲ್ಲೇ ಕಾರ್ಯನಿರ್ವಹಿಸಿತ್ತು. ಈಗ ವಾಹನಗಳೂ ಇಲ್ಲದಿರುವ ಹೊತ್ತಿನಲ್ಲಿ ಕರೆಗಳನ್ನು ಸ್ವೀಕರಿಸುವುದೂ ಸವಾಲಾಗಿದೆ. ಸಾಲದ್ದಕ್ಕೆ ಸಿಬ್ಬಂದಿ ಕೊರತೆಯೂ ಇದೆ. ಮಂಜೂರಾದ 24 ಹುದ್ದೆಗಳಲ್ಲಿ 14 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 10 ಹುದ್ದೆ ಖಾಲಿ ಇದೆ.

ಬಂಟ್ವಾಳ ತಾಲೂಕು ಎಂದರೆ ವಾಮದಪದವು, ಸಿದ್ದಕಟ್ಟೆ, ಪುಂಜಾಲಕಟ್ಟೆ, ಕಾರಿಂಜ, ವಿಟ್ಲ, ಕನ್ಯಾನ, ಫರಂಗಿಪೇಟೆ, ಬಿ.ಸಿ.ರೋಡ್ ಹೀಗೆ ಕಳಂಜಿಮಲೆ, ಕಾರಿಂಜ ಪ್ರದೇಶಗಳಂಥ ಗುಡ್ಡ, ಬೆಟ್ಟದ ಪ್ರದೇಶವನ್ನು ಹೊಂದಿದೆ. ವಿಟ್ಲಕ್ಕೂ ಬಂಟ್ವಾಳದಿಂದಲೇ ವಾಹನಗಳು ಹೋಗಬೇಕಾದರೆ, ಸಾಕಷ್ಟು ಸಮಯ ಬೇಕು. ಬಂಟ್ವಾಳದ 2 ಅಗ್ನಿಶಾಮಕ ವಾಹನಗಳು ಎಂಬ ಬೇಡಿಕೆ ಇದ್ದು, ಪ್ರಸ್ತುತ ಒಂದೇ ವಾಹನದಲ್ಲಿ ಎಲ್ಲಾ ಕರೆಗಳಿಗೂ ಸ್ಪಂದನೆ ನೀಡುವುದು ಸವಾಲಾಗುತ್ತದೆ. ಎಲ್ಲದಕ್ಕೂ ಒಂದೇ ವಾಹನ ತೆರಳುವ ವೇಳೆ ಸಮಯದಲ್ಲೂ ವ್ಯತ್ಯಾಸವಾಗುತ್ತದೆ. ಅಗ್ನಿಶಾಮಕ ವಾಹನಗಳು ಎಷ್ಟು ಬೇಗ ಹೋಗುತ್ತದೋ ಅಷ್ಟು ಬೇಗ ನಂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ಇನ್ನೊಂದು ವಾಹನ ಬೇಕೇ ಬೇಕು. ನಾವು ಖಾಸಗಿ ಸಂಸ್ಥೆಗಳ ಸಿ.ಎಸ್.ಆರ್. ನಿಧಿಯನ್ನು ಇತರ ವಿಭಾಗಗಳಿಗೆ ಪಡೆಯುತ್ತೇವೆ. ಜನರ ಅಗತ್ಯವಾಗಿರುವ ಅಗ್ನಿಶಾಮಕ ವ್ಯವಸ್ಥೆ ನಿಭಾಯಿಸಲು ಅಗತ್ಯವಾದ ವಾಹನವನ್ನೇಕೆ ಖಾಸಗಿಯವರ ಮೂಲಕ ತರಿಸಬಾರದು ಎಂದು ಸಾರ್ವಜನಿಕರೂ ಆಗ್ರಹಿಸುತ್ತಿದ್ದಾರೆ.

ಯಾರಾದರೂ ಬಾವಿಗೆ ಬಿದ್ದಾಗ, ತುರ್ತು ಸಂದರ್ಭ, ಬೆಂಕಿ ಬಿದ್ದಾಗ ಅಗ್ನಿಶಾಮಕ ಸಿಬ್ಬಂದಿ ನೆನಪಾಗುತ್ತದೆ. ಖಾಕಿ ಧರಿಸಿ ಬೆವರು ಹರಿಸಿ ಮಾಡುವ ಅವರು ಎಲ್ಲರೂ ಸುರಕ್ಷರಾದರು ಎಂದು ಖಚಿತವಾದ ಮೇಲೆ ಹೋಗುತ್ತಾರೆ. ಅವರಿಗೆ ಮೂಲಸೌಕರ್ಯವೇ ಇಲ್ಲದಿದ್ದರೆ, ಬೆಂಕಿ ಬಿದ್ದರೂ ನಂದಿಸುವ ವ್ಯವಸ್ಥೆ ಇಲ್ಲದೆ ಅಸಹಾಯಕರಾಗುತ್ತಾರೆ. ಹಾಗಾಗದಂತೆ ಸಮಾಜ ನೋಡಿಕೊಳ್ಳಬೇಕು.

ಕೆಲ ವಿವರಗಳು ಇಲ್ಲಿವೆ:

ಬಂಟ್ವಾಳದಲ್ಲಿ ಅಗ್ನಿಶಾಮಕ ಠಾಣೆ ಆರಂಭ- 2010

2024ರಲ್ಲಿ ಒಟ್ಟು ಅವಘಡ, 136-ಬೆಂಕಿ ಬಿದ್ದಿರುವ ಪ್ರಕರಣ, 24-ರಕ್ಷಣೆಯ ಕರೆಗಳು

2025ರಲ್ಲಿ ಒಟ್ಟು ಅವಘಡ 143 ಕರೆಗಳು ಬಂದಿವೆ.

2021ರಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು: 291-ಬೆಂಕಿ ಅವಘಡಗಳು, 16-ರಕ್ಷಣಾ ಕರೆಗಳು

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "ಬೇಸಗೆ ಬಂದ್ರೆ ಬೆಂಕಿ ಅವಘಡ ಜಾಸ್ತಿ: ಆದರೆ ಅಗ್ನಿಶಾಮಕದಳದಲ್ಲಿ ಸಿಬ್ಬಂದಿ ಕೊರತೆ, ವಾಹನಗಳೂ ಕಡಿಮೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*