ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಏಕೈಕ ಬಾಲಗಣಪತಿ ಸನ್ನಿಧಿಯಾಗಿರುವ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನದಲ್ಲಿ ಮೂಲಮಂತ್ರ ಲಕ್ಷ ಜಪಯಜ್ಞ, ದೂರ್ವ ಹೋಮ ಕಾರ್ಯಕ್ರಮ ಡಿ.28ರಂದು ನಡೆಯಲಿದ್ದು, 29ರಂದು ಚತುರ್ಥ ಪ್ರತಿಷ್ಟಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಉತ್ಸವ ನಡೆಯಲಿಎ ಎಂದು ಶ್ರೀ ಬಾಲಗಣಪತಿ ಸೇವಾ ಟ್ರಸ್ಟ್ ಅನ್ನಪ್ಪಾಡಿ ಅಧ್ಯಕ್ಷ ಯಶವಂತ ದೇರಾಜೆಗುತ್ತು ಹೇಳಿದ್ದಾರೆ.

ಗುರುವಾರ ಅವರು ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಾಲಯದ ನಾಲ್ಕನೇ ವರ್ಷದ ಜಾತ್ರೋತ್ಸವ ಸಂಭ್ರಮಕ್ಕೆ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ಲಕ್ಷಜಪಯಜ್ಞ ನಡೆಯಲಿದೆ. ಇದಕ್ಕೆ ಊರ, ಪರವೂರ ಭಕ್ತರು ಕೈಜೋಡಿಸಿದ್ದು, ದೇವಸ್ಥಾನದ ಅಭಿವೃದ್ಧಿಗೂ ಹಾಗೂ ಭಕ್ತರ ಅಭೀಷ್ಠ ಸಿದ್ಧಿಗೂ ಸಹಕಾರಿಯಾಗಲಿದೆ. ಈಗಾಗಲೇ ದೇವಸ್ಥಾನಕ್ಕೆ ಬೇಕಾದ ಜಾಗ ಖರೀದಿ, ಜಾಗ ದಾನವನ್ನು ಸಮೀಪದ ಭೂಮಾಲೀಕರು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಊರವರ ಸಹಕಾರ ಇದೆ ಎಂದರು.
ಸಜೀಪಮಾಗಣೆ ತಂತ್ರಿ ಹಾಗೂ ಬಾಲಗಣಪತಿ ಸೇವಾ ಟ್ರಸ್ಟ್ ಸದಸ್ಯ ಎಂ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಕ್ಷೇತ್ರದಲ್ಲಿ ಬಾಲಗಣಪತಿ ಹೋಮ ವಿಶೇಷವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಶ್ರೀ ಬಾಲಗಣಪತಿ ದೇವರ ಪ್ರಧಾನ ಏಕದೇವ ದೇವಾಲಯವಿದು. ಪಶ್ಚಿಮಾಭಿಮುಖಿಯಾಗಿ ಇರುವ ದೇವಸ್ಥಾನದಲ್ಲಿ ಲಿಂಗರೂಪದ ದೇವರ ಆರಾಧನೆಯಾಗುತ್ತಿದೆ ಎಂದರು. ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ, ಟ್ರಸ್ಟ್ ಸದಸ್ಯ ರಮೇಶ್ ಅನ್ನಪ್ಪಾಡಿ, ಜಯಪ್ರಕಾಶ್ ಪೆರ್ವ, ಲಿಂಗಪ್ಪ ಎಸ್. ದೋಟ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Be the first to comment on "28ರಂದು ಅನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನದಲ್ಲಿ ಮೂಲಮಂತ್ರ ಲಕ್ಷಜಪಯಜ್ಞ"