
ಜೀವನದಲ್ಲಿ ಸ್ವಚ್ಛತೆಯು ಬಹಳ ಮುಖ್ಯವಾದದ್ದು, ವೈಯಕ್ತಿಕ ಸ್ವಚ್ಛತೆಯ ಮೂಲಕ ತಮ್ಮ ಪರಿಸರವನ್ನು ಸ್ವಚ್ಛಗೊಳಿಸುವುದು ವಿದ್ಯಾರ್ಥಿಗಳ ಜೀವನದಲ್ಲಿ ಹಾಸುಹೊಕ್ಕಾಗಿ ಇರಬೇಕು. ಪ್ರಾಥಮಿಕ ಹಂತದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಜೀವನದಲ್ಲಿ ಮೂಡಿಸಿಕೊಂಡಾಗ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಎಂದು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಹಸಿರುದಳ ಮಂಗಳೂರು ಆಶ್ರಯದಲ್ಲಿ ಕಂಟಿಕ ಕಿರಿಯ ಪ್ರಾಥಮಿಕ ಶಾಲಾ ಸಹಕಾರದೊಂದಿಗೆ ಬಾಳ್ತಿಲ ಗ್ರಾಮದ ಕಾಂಪ್ರಪೈಲು ಉಳ್ಳಾಲ್ತಿ ಅಮ್ಮನವರ ಮತ್ತು ಅಜ್ವರ ದೈವಂಗಳ ಬಂಡಾರಮನೆಯಲ್ಲಿ ನಡೆದ ಪುದ್ವಾರ್ ಮೆಚ್ಚಿ ಜಾತ್ರೆ ಬಳಿಕ ಪರಿಸರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಜಾತ್ರೆ, ನೇಮ, ಇನ್ನಿತರ ಯಾವುದೇ ಸಮಾರಂಭಗಳಲ್ಲಿ ಕಾರ್ಯಕ್ರಮಗಳು ಮುಗಿದ ನಂತರ ಕಾರ್ಯಕ್ರಮದ ನಡೆದ ಪರಿಸರಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಕಾರ್ಯಕ್ರಮದ ಸಂಘಟಕರು ಗಮನ ಹರಿಸಬೇಕು, ಈ ಬಗ್ಗೆ ಸಂಘಟಕರಿಗೆ ಪಂಚಾಯತಿಯಿಂದ ಸೂಕ್ತ ಮಾಹಿತಿ ನೀಡಲಾಗುವುದು ಎಂದರು.
ಈ ಸಂದರ್ಭ ಕಂಟಿಕ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪರಿಸರವನ್ನು ಯಾವ ರೀತಿ ಸ್ವಚ್ಛ ಇಡಬಹುದು ಎಂಬುದರ ಬಗ್ಗೆ ಮಾಹಿತಿಯೊಂದಿಗೆ ವಿವರಿಸಲಾಯಿತು. ಹಸಿರುದಳ ಮಂಗಳೂರು ವತಿಯಿಂದ ಶಾಲಾ ಎಲ್ಲಾ ಮಕ್ಕಳಿಗೆ ಪೌಚ್ ಬಾಕ್ಸ್ ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತ್ ಸ್ಥಳಿಯ ಸದಸ್ಯರಾದ ರಾಜೇಶ್, ಹಸಿರುದಳ ಮಂಗಳೂರಿನ ಮೇಲ್ವಿಚಾರಕಿ ಪುಷ್ಪ, ಶೌರ್ಯ ವೀಪತು ನಿರ್ವಹಣಾ ಘಟಕದ ಸಂಯೋಜಕಿ ವಿದ್ಯಾ, ಸದಸ್ಯರಾದ ಚಿನ್ನಾ ಕಲ್ಲಡ್ಕ, ಸೌಮ್ಯ ಬೊಂಡಾಲ, ಕಂಟಿಕ ಶಾಲಾ ಮುಖ್ಯ ಶಿಕ್ಷಕಿ ಚೇತನಾ ಕುಮಾರಿ, ಶಿಕ್ಷಕಿ ಮೋನಿಷ, ಮಾಧವ ಮೊದಲಾದವರು ಉಪಸ್ಥಿತರಿದ್ದರು.


Be the first to comment on "ಕಾರ್ಯಕ್ರಮ ಮುಗಿದ ಬಳಿಕ ಸ್ಚಚ್ಛತೆ ಕುರಿತು ಸಂಘಟಕರು ಗಮನಹರಿಸಬೇಕು: ಗ್ರಾಪಂ ಅಧ್ಯಕ್ಷ ಚಂದ್ರಶೇಖರ್"